ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಬಂಧನ

Published 2 ಜುಲೈ 2024, 15:24 IST
Last Updated 2 ಜುಲೈ 2024, 15:24 IST
ಅಕ್ಷರ ಗಾತ್ರ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.

ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ. ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

2023ರಲ್ಲೂ ಇಂಥದ್ದೇ ಘಟನೆ: ಮಗು ಸಾಯಿಸಿ ಶೌಚಾಲಯದೊಳಗೆ ತುರುಕಿದ್ದ ವಿದ್ಯಾರ್ಥಿನಿ

ಕೋಲಾರ ನಗರದ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ 2023ರಲ್ಲಿ ಇಂಥದ್ದೇ ಘಟನೆ ಸಂಭವಿಸಿತ್ತು.

ಆಗ ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳಿಗೆ ಶೌಚಾಲಯದಲ್ಲಿ ಮಗು ಜನಿಸಿತ್ತು. ಬಾಲಕಿಯ ಆ ಮಗುವಿನ ಕತ್ತು ಹಿಸುಕಿ ಸಾಯಿಸಿ ಶೌಚಾಲಯದೊಳಗೆ ತುರುಕಿದ್ದಳು. ನಂತರ ಹೊರಗೆ ಬಂದು ರಕ್ತಸ್ರಾವವಾಗಿದ್ದು, ತಾಯಿಯನ್ನು ಕರೆಸುವಂತೆ ಉಪನ್ಯಾಸಕರಿಗೆ ಹೇಳಿದ್ದಳು. ನಂತರ ಸ್ವಚ್ಛತಾ ಸಿಬ್ಬಂದಿ ಶೌಚಾಲಯ ಸ್ವಚ್ಛಗೊಳಿಸಲು ಹೋದಾಗ ಮಗುವಿರುವುದು ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಬಾಲಕಿ ತಾನೇ ಮಗುವನ್ನು ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಳು. ಬಾಲಕಿಯು ಫೇಸ್‌ಬುಕ್‌ನಲ್ಲಿ ಯುವಕನನ್ನು ಪರಿಚಯಿಸಿಕೊಂಡು ಪ್ರೀತಿಸುತ್ತಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT