ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆ
Last Updated 4 ಮೇ 2020, 15:50 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆಯಾಗಿದ್ದು, ಜನಜೀವನ ಹಾಗೂ ವಾಣಿಜ್ಯ ವಹಿವಾಟು ಸಹಜ ಸ್ಥಿತಿಗೆ ಮರಳಿತು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ ಸೇವೆ ಆರಂಭಿಸುವ ಸಂಬಂಧ ಜಿಲ್ಲಾಡಳಿತವು ಬೆಳಿಗ್ಗೆ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಹೀಗಾಗಿ ಬಸ್‌ ಸಂಚಾರದ ಬಗ್ಗೆ ಜನರಲ್ಲಿ ಗೊಂದಲ ಮುಂದುವರಿದಿತ್ತು.

ಬಳಿಕ ಲಾಕ್‌ಡೌನ್‌ ಸಡಿಲಿಕೆ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭಕ್ಕೆ ಸಮ್ಮತಿ ಸೂಚಿಸಿದರು. ಮಧ್ಯಾಹ್ನ 12 ಗಂಟೆಯ ನಂತರ ಬಸ್‌ಗಳು ರಸ್ತೆಗಿಳಿದವು.

ಕೋಲಾರ ವಿಭಾಗದ 5 ಡಿಪೊಗಳಿಂದ ಒಟ್ಟಾರೆ 30 ಅನುಸೂಚಿಗಳಲ್ಲಿ (ಶೆಡ್ಯೂಲ್‌) ಬಸ್‌ ಸೇವೆ ಕಲ್ಪಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಪ್ರಯಾಣಿಕರ ಕೊರತೆ ಕಾರಣಕ್ಕೆ 19 ಅನುಸೂಚಿಗಳಲ್ಲಿ ಬಸ್‌ ಸಂಚರಿಸಿದವು. ಮುಖ್ಯವಾಗಿ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳ ನಡುವೆ ಬಸ್‌ಗಳು ಸಂಚರಿಸಿದವು.

ಬಸ್‌ನ ಆಸನ ಸಾಮರ್ಥ್ಯದ ಅರ್ಧದಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಯಿತು. ಪ್ರಯಾಣಿಕರು ಬಸ್‌ಗೆ ಹತ್ತುವ ಮುನ್ನ ಬಾಗಿಲಲ್ಲೇ ಅವರ ದೇಹದ ಉಷ್ಣತೆ ಪರೀಕ್ಷಿಸಲಾಯಿತು. ಮಾಸ್ಕ್‌ ಧರಿಸಿದ್ದವರಿಗೆ ಮಾತ್ರ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು. ಪ್ರಯಾಣಿಕರು ಬಸ್‌ನಲ್ಲಿ ಅಂತರ ಕಾಯ್ದುಕೊಂಡು ಕುಳಿತಿದ್ದ ದೃಶ್ಯ ಕಂಡುಬಂತು.

ಭರ್ಜರಿ ವಹಿವಾಟು: ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಭರ್ಜರಿ ವಹಿವಾಟು ನಡೆಯಿತು. ದಿನಸಿ, ಬಟ್ಟೆ, ಆಭರಣ, ಪಾದರಕ್ಷೆ, ಬೇಕರಿ, ಕಟ್ಟಡ ನಿರ್ಮಾಣ ಸಾಮಗ್ರಿ, ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳನ್ನು ಪ್ರತಿನಿತ್ಯದಂತೆ ತೆರೆದು ವಹಿವಾಟು ನಡೆಸಲಾಯಿತು.

ಪ್ರಮುಖ ರಸ್ತೆ, ವೃತ್ತ ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬಂತು. ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿತ್ತು. ಲಾಕ್‌ಡೌನ್‌ ಕಾರಣಕ್ಕೆ ಬಿಕೋ ಎನ್ನುತ್ತಿದ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನ ಸವಾರರು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು ಸೀಮಿತ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯ ಚಟುವಟಿಕೆ ಆರಂಭಿಸಿದವು.

ಸರ್ಕಾರಿ ಕಚೇರಿಗಳು ಜನರಿಗೆ ಸೇವೆ ಒದಗಿಸಿದವು. ಆದರೆ, ಕಚೇರಿಗಳಲ್ಲಿ ಜನರ ಮತ್ತು ಸಿಬ್ಬಂದಿಯ ಸಂಖ್ಯೆ ವಿರಳವಾಗಿತ್ತು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹೆಚ್ಚಿನ ಜನದಟ್ಟಣೆಯಿತ್ತು.

ನಿರ್ಬಂಧ

ಮುನ್ನೆಚ್ಚರಿಕೆ ಕ್ರಮವಾಗಿ ಕ್ಷೌರದಂಗಡಿ, ಬ್ಯೂಟಿ ಪಾರ್ಲರ್‌, ದಂತ ಚಿಕಿತ್ಸಾಲಯ, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ. ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿದಿನನಿತ್ಯದ ಪೂಜೆ ಹೊರತುಪಡಿಸಿ ಧಾರ್ಮಿಕ ಚಟುವಟಿಕೆ ನಿಷೇಧಿಸಲಾಗಿದೆ. ಖಾಸಗಿ ಬಸ್‌ ಮತ್ತು ಆಟೊಗಳ ಸಂಚಾರ ನಿರ್ಬಂಧಿಸಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಮುಂದುವರಿಸಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್‌ ಬೋಧನೆ ಆರಂಭಿಸಲಾಗಿದೆ. ಹೋಟೆಲ್‌ಗಳು ಆರಂಭವಾದರೂ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT