ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಪ್ರಚಾರದಲ್ಲಿ ಬಿಜೆಪಿಯದ್ದು ಎತ್ತಿದ ಕೈ: ಬೈರತಿ ಸುರೇಶ್‌ ಟೀಕೆ

ಬಿಜೆಪಿಯವರು ಸಮಾಜ ವಿರೋಧಿಗಳು: ಬೈರತಿ ಸುರೇಶ್‌ ಟೀಕಾ ಪ್ರಹಾರ
Published 25 ಮೇ 2024, 0:51 IST
Last Updated 25 ಮೇ 2024, 0:51 IST
ಅಕ್ಷರ ಗಾತ್ರ

ಕೋಲಾರ: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಕೊಲೆಗಳಾಗಿದ್ದವು, ಎಷ್ಟು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿತ್ತು ಎಂಬುದನ್ನು ಹೇಳಲು ನಾನು ಹೋಗುವುದಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ತಗ್ಗಿವೆ. ಅಪಪ್ರಚಾರದಲ್ಲಿ ಬಿಜೆಪಿಯದ್ದು ಎತ್ತಿದ ಕೈ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹರಿಹಾಯ್ದರು.

ನಗರದ ಹೊರವಲಯದ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಿತ್ತು. ಆಕೆ ರಾತ್ರಿ 9 ಗಂಟೆ ಸಮಯದಲ್ಲಿ ಅಲ್ಲಿಗೆ ಏಕೆ ಹೋಗಿದ್ದರು ಎಂಬುದಾಗಿ ಅಂದಿನ ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಇಂಥ ಬಿಜೆಪಿಯವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

‘ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಮುಖ್ಯಮಂತ್ರಿ, ಗೃಹ ಸಚಿವರು ಸಮರ್ಥರಿದ್ದಾರೆ. ಕೆಲ ಘಟನೆಗಳು ನಡೆಯಬಾರದಿತ್ತು. ಅದಕ್ಕೆ ನಮ್ಮ ವಿಷಾದವಿದೆ. ಮುಂದಿನ ದಿನಗಳಲ್ಲಿ ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಲು ಪ್ರಯತ್ನ ನಡೆಸುತ್ತೇವೆ’ ಎಂದರು.

ಬರ ಪರಿಹಾರ ರೈತರಿಗೆ ಇನ್ನೂ ಸಿಕ್ಕಿಲ್ಲ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ‘ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಎಲ್ಲರ ರೈತರಿಗೂ ಸಿಕ್ಕಿದೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಯಾವತ್ತಾದರೂ ಅವರು ಒಳ್ಳೆಯ ವಿಚಾರ ಮಾತನಾಡಿದ್ದಾರೆಯೇ? ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್‌ನ ಜನಪ್ರಿಯ ಐದು ಗ್ಯಾರಂಟಿ ಯೋಜನೆಗಳನ್ನೇ ಕೆಟ್ಟ ಯೋಜನೆ ಎಂದು ಹೇಳಿದ ಬಿಜೆಪಿಯರು ಸಮಾಜ ವಿರೋಧಿಗಳು. ಬಿಜೆಪಿ ಹಾಗೂ ಜೆಡಿಎಸ್‌ನವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆಯನ್ನು ಅವರು ಕಳೆದುಕೊಂಡಿದ್ದಾರೆ’ ಎಂದರು.

ತಲೆಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣ ಕುರಿತು, ‘ವಿದೇಶದಿಂದ ಅವರನ್ನು ಕರೆತರುವ ವಿಚಾರವಾಗಿ ಕೇಂದ್ರಕ್ಕೆ ಸಿದ್ದರಾಮಯ್ಯ ಎರಡು ಬಾರಿ ಪತ್ರ ಬರೆದಿದ್ದಾರೆ, ಗೃಹಸಚಿವರೂ ಪತ್ರ ಬರೆದಿದ್ದಾರೆ. ಈ ಸಂಬಂಧ ಎಸ್‌ಐಟಿ ಕೂಡ ಪ್ರಯತ್ನ ನಡೆಸುತ್ತಿದೆ. ಎಚ್‌.ಡಿ.ದೇವೇಗೌಡರು ಕೂಡ ಪತ್ರ ಬರೆದಿದ್ದಾರೆ’ ಎಂದು ಹೇಳಿದರು.

‘ಕೋಲಾರದಲ್ಲೂ ಉತ್ತಮ ಮಳೆಯಾಗಿದೆ. ಕೆರೆಗಳು ತುಂಬಿಕೊಂಡಿವೆ. ಇದಕ್ಕೆ ಕಾರಣ ಕಾಂಗ್ರೆಸ್‌ನ ಕೆ.ಸಿ.ವ್ಯಾಲಿ ಯೋಜನೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆ ನೀಡಿದ್ದರು’ ಎಂದರು.

‘ಮೇಲ್ಮನೆಗೆ ರಮೇಶ್‌ ಕುಮಾರ್‌ ಸೂಕ್ತ ವ್ಯಕ್ತಿ’ ‘ಮೇಲ್ಮನೆ ಸದಸ್ಯರಾಗಲು ಕೆ.ಆರ್‌.ರಮೇಶ್‌ ಕುಮಾರ್‌ ಅತ್ಯಂತ ಸೂಕ್ತ ವ್ಯಕ್ತಿ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲು ನಮ್ಮ ಬೆಂಬಲವಿದೆ ಉತ್ತಮ ಆಯ್ಕೆ ಕೂಡ. ನಾವೆಲ್ಲರೂ ಅವರನ್ನು ಸಮರ್ಥಿಸಿಕೊಳ್ಳುತ್ತೇವೆ’ ಎಂದು ಸಚಿವ ಬೈರತಿ ಸುರೇಶ್‌ ತಿಳಿಸಿದರು. ‘ಪರಿಷತ್‌ ಸದಸ್ಯ ಸ್ಥಾನವನ್ನು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಕೇಳಿದರೂ ನಮ್ಮ ಒಪ್ಪಿಗೆ ಇದೆ. ಅಂತಿಮವಾಗಿ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ’ ಎಂದರು. ‌ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಿಂದ ಬಂದಿದ್ದ ಕಾಂಗ್ರೆಸ್‌ ನಿಯೋಗ ಕೂಡ ರಮೇಶ್‌ ಕುಮಾರ್‌ ಅವರನ್ನು ಎಂಎಲ್‌ಸಿ ಮಾಡಬೇಕೆಂದು ಸಚಿವರಿಗೆ ಹಕ್ಕೊತ್ತಾಯ ಮಂಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT