ಗುರುವಾರ , ಜನವರಿ 30, 2020
19 °C
ಶ್ರೀನಿವಾಸಪುರ: ಬಿದಿರು, ಈಚಲು ದಬ್ಬೆಗಳ ಬಳಸಿ ಕಲಾತ್ಮಕ ವಸ್ತುಗಳ ತಯಾರಿ

ಅಲೆಮಾರಿಗಳ ಬಿದಿರು ಕಾಯಕ

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಶ್ರೀನಿವಾಸಪುರ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕು. ಹಾಗಾಗಿ ವ್ಯಾಪಾರ ವ್ಯವಹಾರದಲ್ಲಿ ಎರಡೂ ರಾಜ್ಯಗಳ ಜನರು ಬೆರೆಯುತ್ತಾರೆ. ‌ಅಲ್ಲಿನ ಕುಶಲಕರ್ಮಿಗಳು ಇಲ್ಲಿಗೆ ಬಂದು ತಮ್ಮ ಕೌಶಲದಿಂದ ಹೊಟ್ಟೆ ಹೊರೆಯುತ್ತಾರೆ.

ಆಂಧ್ರಪ್ರದೇಶದಿಂದ ಬಂದ ಕೆಲವು ಕುಟುಂಬಗಳು ಬಿದಿರು ಹಾಗೂ ಈಚಲು ಬಳಸಿ ವಿವಿಧ ವಸ್ತುಗಳನ್ನು ಹೆಣೆದು ಮಾರಾಟ ಮಾಡುತ್ತಿವೆ. ಶ್ರೀನಿವಾಸಪುರ ಹೊರ ಭಾಗದ ರಸ್ತೆ ಬದಿಯಲ್ಲಿ ಒಂದೆರಡು ತಿಂಗಳು ನೆಲೆಸಿ ಬಿದಿರು ಅಥವಾ ಈಚಲು ದಬ್ಬೆಗಳನ್ನು ಬಳಸಿ ಕಲಾತ್ಮಕ ವಸ್ತುಗಳನ್ನು ತಯಾರಿಸುವರು.

ಹಸಿ ಬಿದಿರಿನ ಬೊಂಬನ್ನು ವಿಶೇಷವಾದ ಕತ್ತಿಯಿಂದ ಸೀಳಿ, ಹಸಿರು ಹಾಗೂ ಬಿಳಿ ಭಾಗ ಪತ್ಯೇಕಿಸುತ್ತಾರೆ. ಹೂದಾನಿ, ಬುಟ್ಟಿ, ಕೋಳಿ ಮಕ್ಕರಿ ಹೀಗೆ ಹಲವು ವಿವಿಧ, ಬೇರೆ ಬೇರೆ ಗಾತ್ರದ ವಸ್ತುಗಳನ್ನು ಸುಂದರವಾಗಿ ಹೆಣೆದು ರಸ್ತೆ ಬದಿಯಲ್ಲಿಯೇ ಪ್ರದರ್ಶನಕ್ಕೆ ಇಡುತ್ತಾರೆ. ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರೇ ಇವರ ಗ್ರಾಹಕರು.

ಕಲಾತ್ಮಕ ವಸ್ತುಗಳನ್ನು ಹೆಣೆಯಲು ಅಗತ್ಯವಾದ ಉತ್ತಮ ಗುಣಮಟ್ಟದ ಬಿದಿರು ಸ್ಥಳೀಯವಾಗಿ ಸಿಗುವುದಿಲ್ಲ. ಬಿದಿರು ಬೊಂಬನ್ನು ದೂರ ಪ್ರದೇಶಗಳಿಂದ ತರಿಸಿಕೊಳ್ಳಬೇಕು. ಮೈಮುರಿದು ದುಡಿಯಬೇಕು. ಆದರೂ ಪರವಾಗಿಲ್ಲ. ದಿನದ ಕೂಲಿಗೆ ಮೋಸವಾಗುವುದಿಲ್ಲ ಎಂಬುದು ಬಿದಿರು ಕಲಾವಿದರ ಅಭಿಪ್ರಾಯ.

ಜನರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿದೆ. ಮನೆಯ ಒಳಗೆ ಹಾಗೂ ಹೊರಗೆ ಅಲಂಕಾರಿಕ ವಸ್ತುಗಳನ್ನು ಇರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಾಗಾಗಿ ಈ ವೃತ್ತಿಗೆ ಬೇಡಿಕೆ ಇದೆ. ಆದರೂ ರಸ್ತೆ ಬದಿಯಲ್ಲಿ ಮಾರುವುದರಿಂದ ಕೊಳ್ಳುವವರು ಚೌಕಾಸಿ ಮಾಡುತ್ತಾರೆ. ಅದೇ ಪಟ್ಟಣದ ಶೋ ರೂಂಗಳಲ್ಲಿ ಹೇಳಿದ ಬೆಲೆ ಕೊಟ್ಟು ಖರೀದಿಸುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ನಾಟಿ ಕೋಳಿ ಮರಿ ಸಾಕಲು, ಹುಂಜಗಳನ್ನು ಇಡಲು ವಿಶೇಷವಾಗಿ ಎತ್ತರದ ಬುಟ್ಟಿಗಳನ್ನು ಹೆಣೆಯುತ್ತಾರೆ. ಊಟದ ಬುಟ್ಟಿ, ಹೂ ಬುಟ್ಟಿ, ವಿವಿಧ ಆಕಾರದ ಹೂದಾನಿಗಳನ್ನು ಹೆಣೆಯುವ ಇವರು, ಕೆಲವು ಸಲ ತಾವು ಹೆಣೆದ ವಸ್ತುಗಳಿಗೆ ಆಕರ್ಷಕ ಬಣ್ಣಗಳನ್ನೂ ಬಳಿಯುವರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು