ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಕೇತಗಾನಹಳ್ಳಿ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

ಮಂಜುನಾಥ ಎಸ್
Published : 30 ಸೆಪ್ಟೆಂಬರ್ 2024, 7:09 IST
Last Updated : 30 ಸೆಪ್ಟೆಂಬರ್ 2024, 7:09 IST
ಫಾಲೋ ಮಾಡಿ
Comments

ಬಂಗಾರಪೇಟೆ: ಚಿನ್ನದನಾಡಿನ ಬೆಟ್ಟದ ತಪ್ಪಲಿನಲ್ಲಿ ಮಳೆ ನೀರು ಸಂಗ್ರಹಿಸಬಲ್ಲ ಬೆರಳೆಣಿಕೆಯಷ್ಟು ಕೆರೆಗಳನ್ನು ಹೊರತುಪಡಿಸಿ, ಉಳಿದಂತೆ ಸಾಕಷ್ಟು ಕೆರೆಗಳು ಅವನತಿಯ ಅಂಚಿನಲ್ಲಿದ್ದು, ಮೂಲ ಸೌಂದರ್ಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿವೆ. 

ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ 46 ಎಕರೆ ವಿಸ್ತೀರ್ಣದಲ್ಲಿರುವ ವಿಶಾಲವಾದ ಕೆರೆಯು 0.25 ಟಿಎಂಸಿಯಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಕಾಮಸಮುದ್ರ ಹೋಬಳಿಯ ಮೂರನೇ ಅತಿದೊಡ್ಡ ಕೆರೆಯಾಗಿದೆ. ಇದೇ ಕಾರಣಕ್ಕಾಗಿ ಈ ಕೆರೆಯನ್ನು ದೊಡ್ಡಕೆರೆ ಎಂದೇ ಕರೆಯಲಾಗುತ್ತದೆ. 

ಕೆಜಿಎಫ್‌ನ ಬೆಟ್ಟ–ಗುಡ್ಡೆಗಳಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಗ್ರಾಮದಲ್ಲಿ 1926ರಲ್ಲಿ ಈ ಕೆರೆಯನ್ನು ಮೈಸೂರು ದಿವಾನರು ನಿರ್ಮಿಸಿದ್ದರು. ಆದರೆ, ಕೆರೆಯ ಏರಿ ಕೊಚ್ಚಿ ಹೋಗಿದ್ದು, ಕೋಡಿ ಪ್ರದೇಶಗಳು ಶಿಥಿಲಾವಸ್ಥೆ ತಲುಪಿವೆ. ಇದರಿಂದಾಗಿ ಕೆರೆಯ ಸ್ವರೂಪವೇ ಬದಲಾಗಿದೆ.

ಕೆರೆಯ ತುಂಬ ಹೂಳು ತುಂಬಿಕೊಂಡಿದೆ. ಕೆರೆಯ ಕಟ್ಟೆ ಕಿತ್ತು ಹೋಗಿರುವುದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೆರೆ ವ್ಯಾಪ್ತಿಯ ಪ್ರದೇಶದಲ್ಲಿ ಜಾಲಿ ಮರಗಳು, ಮುಳ್ಳಿನ ಗಿಡಗಳು, ಪೊದೆಗಳು, ಗಿಡಗಂಟಿಗಳು ಬೆಳೆದಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಈ ಕೆರೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಕೆರೆಗೆ ಕಟ್ಟೆಯನ್ನು ನಿರ್ಮಿಸಬೇಕು. ಇದರಿಂದ ಕೆರೆಯಲ್ಲಿ ನೀರು ಶೇಖರಣೆಯಾಗುವುದಲ್ಲದೆ, ಅಂತರ್ಜಲ ವೃದ್ಧಿಯಾಗಲಿದೆ ಎಂಬುದು ಗ್ರಾಮಸ್ಥರ ವಾದ. 

ವೃಷಭಾವತಿ ಕೆರೆ ಮತ್ತು ಮುಷ್ಟ್ರಹಳ್ಳಿಯ ಕೆರೆಯ ನಂತರದ ಸ್ಥಾನವನ್ನು ಈ ಕೆರೆ ಹೊಂದಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳೇ ಕಳೆದರೂ, ಕೆರೆ ಪುನಶ್ಚೇತನ ಮಾತ್ರ ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರ ಬೇಸರ ವ್ಯಕ್ತಪಡಿಸುತ್ತಾರೆ. 

ಕೆರೆಗಳು ಆಯಾ ಗ್ರಾಮಗಳ ಅಂತರ್ಜಲ ಮಟ್ಟ ವೃದ್ಧಿಸುತ್ತವೆ. ರೈತರ ಪಾಲಿಗೆ ಕೆರೆಗಳು ಭಗೀರಥ ಇದ್ದಂತೆ. ಆದರೆ, ಕೆರೆಗಳನ್ನು ನಿರ್ಲಕ್ಷಿಸುತ್ತಿರುವ ಪರಿಣಾಮ ಕೆರೆಗಳು ಅವಸಾನದ ಹಂತ ತಲುಪುತ್ತಿವೆ. ಇದರಿಂದಾಗಿ ಅಂತರ್ಜಲದ ಮಟ್ಟವೂ ಕುಸಿಯುತ್ತಿದೆ. ಈ ಕೆರೆಯು ಸುತ್ತಮುತ್ತಲಿನ ಐದಾರು ಹಳ್ಳಿಗಳ ಜಮೀನಿಗೆ ನೀರುಣಿಸುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮದ ರೈತರು ಭತ್ತ ಸೇರಿದಂತೆ ಇನ್ನಿತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುತ್ತಿದ್ದರು. ಆದರೆ, ಇದೀಗ ಈ ಕೆರೆಯ ಅವಸಾನದಿಂದಾಗಿ ಕೃಷಿಗೆ ನೀರಿನ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ರೈತರು. 

ಕೆರೆಗಳ ಅಭಿವೃದ್ಧಿಯಿಂದ ಕೃಷಿ ಪ್ರಾಣಿ–ಪಕ್ಷಿಗಳಿಗೆ ನೀರು ಆಹಾರ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತದೆ. ಆದರೆ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಕೆರೆಗಳ ಪುನಃಶ್ಚೇತನಕ್ಕೆ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. 
ಚಂದ್ರಶೇಖರ ರೈತ ಕೇತಗಾನಹಳ್ಳಿ
ಕೆರೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಬೇಕು. ಕೆರೆಗೆ ಸುತ್ತಲೂ ಕಟ್ಟೆ ನಿರ್ಮಿಸಬೇಕು. ಇದರಿಂದ ಅಂತರ್ಜಲ ಮಟ್ಟ ವೃದ್ಧಿ ಮತ್ತು ಸಂರಕ್ಷಣೆಯಾಗಲಿದೆ. 
ಮಂಜುಳಾ ಶ್ರೀನಿವಾ ಅಧ್ಯಕ್ಷೆ ಗ್ರಾಮ ಪಂಚಾಯಿತಿ 
ರೈತರ ಹಿತ ಕಾಯುವ ದೃಷ್ಟಿಯಿಂದ ಕೇತಗಾನಹಳ್ಳಿ ಗ್ರಾಮದ ದೊಡ್ಡಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ತರಲಾಗುವುದು
ಎಸ್.ಎನ್. ನಾರಾಯಣಸ್ವಾಮಿ ಶಾಸಕ
ಪೂರ್ವಿಕರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ರಾಜಕಾಲುವೆಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಿದ್ದರು. ಈಗ ರಾಜಕಾಲುವೆಗಳು ಒತ್ತುವರಿ ಆಗಿವೆ. ಇದರಿಂದ ಮಳೆಯ ನೀರು ಕೆರೆಗಳಿಗೆ ಹರಿಯುತ್ತಿಲ್ಲ. ಮತ್ತೊಂದೆಡೆ ಒತ್ತುವರಿಯಿಂದ ಕೆರೆ ಹಾಗೂ ರಾಜಕಾಲುವೆಗಳ ಮೂಲ ಸ್ವರೂಪವೇ ಬದಲಾಗಿದೆ
ರವಿ ಕುಮಾರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ
ಗ್ರಾಮದ ದೊಡ್ಡ ಕೆರೆ ತುಂಬಿ ಕಾಮಸಮುದ್ರ ವೃಷಭಾವತಿ ಕೆರೆಗೆ ನೀರು ಹರಿಯುತ್ತಿತ್ತು. ಆದರೆ ಇಂದು ಕೆರೆಯ ಕಟ್ಟೆ ಒಡೆದುಹೋಗಿದ್ದರಿಂದ ನೀರು ಸಂಗ್ರಹಣೆ ಆಗುತ್ತಿಲ್ಲ.
ಚಂದ್ರಶೇಖರ ಬಿಇಎಂಎಲ್ ನಿವೃತ್ತ ನೌಕರ
ಪ್ರತಿ ಕೆರೆಯು ಸುತ್ತಲಿನ ಗ್ರಾಮಗಳಿಗೆ ಜೀವಾಳವಿದ್ದಂತೆ. ಕೆರೆಗಳು ಉಳಿದರೆ ಮಳೆ ನೀರು ಸಂಗ್ರಹಣೆ ಸಾಧ್ಯ. ಅಂತರ್ಜಲ ಮಟ್ಟ ಕಾಪಾಡಲು ಸಹಕಾರಿ. ಕೆರೆಗಳ ನಿರ್ವಹಣೆ ಜವಾಬ್ದಾರಿ ‌ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.
ಮಂಜುನಾಥ. ಕೆ.ವಿ ಗ್ರಾಮ ಪಂಚಾಯಿತಿ ಸದಸ್ಯ  
ಅಮೃತಸರ ಯೋಜನೆ ಅಡಿ ಗ್ರಾಮದ ದೊಡ್ಡಕೆರೆಯನ್ನು ಪುನಃಶ್ಚೇತನ ಮಾಡಿ ಅಭಿವೃದ್ಧಿ ಪಡಿಸಬೇಕು. ಈ ಮೂಲಕ ನೀರಿನ ಸಂಗ್ರಹ ಮಾಡಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ
ಕೇತಗಾನಹಳ್ಳಿ ಕೃಷ್ಣಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT