ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಕಡೆ ವ್ಯಕ್ತಿಗೂ ಬ್ಯಾಂಕಿಂಗ್‌ ಸೇವೆ: ಗೋವಿಂದಗೌಡ

ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ
Last Updated 23 ಜೂನ್ 2021, 14:36 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವ ಸಂಕಲ್ಪದೊಂದಿಗೆ ಡಿಜಟಲೀಕರಣದ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (ಆರ್‌ಬಿಐ) ಮಂಜೂರಾಗಿರುವ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಇಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿ, ‘ವಾಣಿಜ್ಯ ಬ್ಯಾಂಕ್‌ಗಳಿಗಿಂತ ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸುವ ಧ್ಯೇಯ ನಮ್ಮದು. ಗ್ರಾಹಕರು ಠೇವಣಿ ಇಡುವ ಮೂಲಕ ಬ್ಯಾಂಕ್‌ಗೆ ಶಕ್ತಿ ತುಂಬಬೇಕು’ ಎಂದರು.

‘ಸಹಕಾರಿ ವ್ಯವಸ್ಥೆ ಎಂದರೆ ಬುಕ್ ಅಡ್ಜೆಸ್ಟ್‌ಮೆಂಟ್‌ ಎಂಬ ಅಪವಾದವಿದ್ದು, ಇದನ್ನು ದೂರ ಮಾಡುವ ಉದ್ದೇಶಕ್ಕೆ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಟಲೀಕರಣಗೊಳಿಸಲಾಗಿದೆ. ಡಿಸಿಸಿ ಬ್ಯಾಂಕ್ ಆರ್‌ಬಿಐನ ಪರವಾನಗಿಯೊಂದಿಗೆ ಸೇವೆ ಸಲ್ಲಿಸುತ್ತಿದ್ದು, ಪಾರದರ್ಶಕತೆ ಕಾಪಾಡಲಾಗಿದೆ’ ಎಂದು ತಿಳಿಸಿದರು.

‘ಏಳೂವರೆ ವರ್ಷದ ಹಿಂದೆ ನಬಾರ್ಡ್ ಕಚೇರಿಗೆ ಹೋದರೆ ನಮ್ಮನ್ನು ನೋಡಿ ನಗುತ್ತಿದ್ದರು. ಒಂದು ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ಗೆ ₹ 30 ಲಕ್ಷ ನೀಡಲು ನಬಾರ್ಡ್ ಹೆದರಿತ್ತು. ಈ ಅವಮಾನ ಸವಾಲಾಗಿ ಸ್ವೀಕರಿಸಿ 25 ದಿನದಲ್ಲಿ ಕೋರ್ ಬ್ಯಾಂಕಿಂಗ್ ಮಾಡಿ ಸಾಮರ್ಥ್ಯ ತೋರಿಸಿದೆವು’ ಎಂದು ಸ್ಮರಿಸಿದರು.

‘ದಿವಾಳಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಸಿಸಿ ಬ್ಯಾಂಕ್‌ನೊಂದಿಗೆ ವಿಲೀನದ ಪ್ರಸ್ತಾಪ ಹೊಂದಿದ್ದ ಕೋಲಾರ ಡಿಸಿಸಿ ಬ್ಯಾಂಕನ್ನು ನಮ್ಮ ಆಡಳಿತ ಮಂಡಳಿ ಉಳಿಸಿ ಎತ್ತರಕ್ಕೆ ಬೆಳೆಸಿದೆ. ಬ್ಯಾಂಕ್ ನೆಫ್ಟ್, ಆರ್‌ಟಿಜಿಎಸ್‌ ಪಾವತಿ, ಬೆನಿಫಿಟ್ ಟ್ರಾನ್ಸ್‌ಫರ್‌, ಆಧಾರ್ ಬೇಸ್‍ಡ್ ಪೇಮೆಂಟ್, ಎಸ್‍ಎಂಎಸ್, ರೂಪೆ ಕಾರ್ಡ್ ನೀಡಿಕೆ, ಚೆಕ್ ಟ್ರಾನ್ಸಕ್ಷನ್ ಸಿಸ್ಟಮ್, ಮೈಕ್ರೋ ಎಟಿಎಂ, ಮೊಬೈಲ್ ಎಟಿಎಂ ವಾಹನ ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿದೆ’ ಎಂದು ವಿವರಿಸಿದರು.

ಬಡವರ ಬ್ಯಾಂಕ್‌: ‘ಇಂಟರ್‌ನೆಟ್‌ ಬ್ಯಾಂಕಿಂಗ್ ಅನುಷ್ಠಾನ ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. ನಮ್ಮದು ಬಡವರ ಬ್ಯಾಂಕ್. ರೈತರ ನೆರವಿಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ. 5 ಲಕ್ಷ ಮಹಿಳೆಯರು, 35 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಸಾಲ ಒದಗಿಸಿದ ಹೆಮ್ಮೆ ನಮಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಸಹಕಾರಿ ಬ್ಯಾಂಕ್ ಮಾತ್ರ ಬಡವರು ಹಾಗೂ ರೈತರ ಕೈಹಿಡಿಯುತ್ತದೆ. ಈ ಸತ್ಯ ಅರಿತು ಜನರು ಡಿಸಿಸಿ ಬ್ಯಾಂಕ್‌ನಲ್ಲೇ ತಮ್ಮ ಉಳಿತಾಯದ ಹಣ ಠೇವಣಿ ಇಡಬೇಕು. ಕೆಲವರು ಠೇವಣಿ ಇಡಲು ವಾಣಿಜ್ಯ ಬ್ಯಾಂಕ್, ಸಾಲಕ್ಕೆ ಡಿಸಿಸಿ ಬ್ಯಾಂಕ್ ಎಂಬ ಮನಸ್ಥಿತಿಯಲ್ಲಿದ್ದಾರೆ. ಈ ಮನೋಭಾವದಿಂದ ಹೊರ ಬರಬೇಕು. ಠೇವಣಿ ಸಂಗ್ರಹ ಹೆಚ್ಚಿದಷ್ಟು ಮತ್ತಷ್ಟು ಬಡವರು, ರೈತರಿಗೆ ಸಾಲ ಸೌಲಭ್ಯ ಕಲ್ಪಿಸಬಹುದು’ ಎಂದು ತಿಳಿಸಿದರು.

ಬ್ಯಾಂಕ್‌ನ ನಿರ್ದೇಶಕರಾದ ಸೋಮಣ್ಣ, ಎಂ.ಎಲ್‌.ಅನಿಲ್‌ಕುಮಾರ್, ಹನುಮಂತರೆಡ್ಡಿ, ಕೆ.ವಿ.ದಯಾನಂದ್, ವೆಂಕಟರೆಡ್ಡಿ, ನಾಗಿರೆಡ್ಡಿ, ಗೋವಿಂದರಾಜ್, ವೃತ್ತಿಪರ ನಿರ್ದೇಶಕ ಮಹಮ್ಮದ್‌ ಇಲಿಯಾಸ್, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT