ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರು ₹ 5 ಕೋಟಿ ಕೊಟ್ಟಿದ್ದರು: ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಆರೋಪ

ಆಪರೇಷನ್‌ ಕಮಲ
Last Updated 10 ಫೆಬ್ರುವರಿ 2019, 14:50 IST
ಅಕ್ಷರ ಗಾತ್ರ

ಕೋಲಾರ: ‘ಬಿಜೆಪಿಯವರು ನನಗೂ ಹಣದ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ್ದರು. ಇಬ್ಬರು ಶಾಸಕರು ಮತ್ತು ಮಾಜಿ ಶಾಸಕರೊಬ್ಬರು ಮನೆಗೆ ಬಂದು ಮುಂಗಡ ₹ 5 ಕೋಟಿ ಕೊಟ್ಟಿದ್ದರು’ ಎಂದು ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಗಂಭೀರ ಆರೋಪ ಮಾಡಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿಯವರು ಕೊಟ್ಟ ಹಣ 2 ತಿಂಗಳು ನನ್ನ ಮನೆಯಲ್ಲೇ ಇತ್ತು. ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ಮೇರೆಗೆ ಅದನ್ನು ಹಿಂದಿರುಗಿಸಿದೆ’ ಎಂದು ಹೇಳಿದರು.

‘ಬಿಜೆಪಿ ಮಾಜಿ ಶಾಸಕ ಸಿ.ಪಿ.ಯೋಗಿಶ್ವರ್, ಶಾಸಕರಾದ ವಿಶ್ವನಾಥ್ ಮತ್ತು ಅಶ್ವತ್ಥನಾರಾಯಣ ಅವರು ಬೆಂಗಳೂರಿನಲ್ಲಿರುವ ನನ್ನ ಮನೆಗೆ ಬ್ಯಾಗ್‌ನಲ್ಲಿ ಹಣ ತಂದಿಟ್ಟು ಹೋದರು. ಬ್ಯಾಗ್‌ನಲ್ಲಿ ನೋಡಿದರೆ ಹಣವಿತ್ತು. ಇನ್ನೂ ₹ 25 ಕೋಟಿ ಕೊಡುತ್ತೇವೆ ಮತ್ತು ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದರು. ಅವರನ್ನು ಹಣದ ಸಮೇತ ಹಿಡಿದುಕೊಡಲು ಆಗಲಿಲ್ಲ’ ಎಂದು ವಿವರಿಸಿದರು.

‘ಹಣದ ಸಂಗತಿಯನ್ನು ಕುಮಾರಸ್ವಾಮಿಯವರ ಗಮನಕ್ಕೆ ತಂದಾಗ ಈ ವಿಷಯ ದೊಡ್ಡದು ಮಾಡೋದು ಬೇಡವೆಂದು ಹೇಳಿದ್ದರು. ಹೀಗಾಗಿ ಸುಮ್ಮನಾದೆ. ಬಿಜೆಪಿಯವರ ಡೀಲ್‌ಗೆ ಬಗ್ಗುವುದಿಲ್ಲ. ಅಧಿಕಾರದ ಭ್ರಮೆಯಲ್ಲಿರುವ ಅವರು ಶಾಸಕರ ಖರೀದಿಗೆ ನಡೆಸುತ್ತಿರುವ ಪ್ರಯತ್ನಗಳೆಲ್ಲಾ ವಿಫಲವಾಗಿವೆ’ ಎಂದು ವಾಗ್ದಾಳಿ ನಡೆಸಿದರು.

‘ಆ ನಾಯಕರು ಸಚಿವ ಸ್ಥಾನ ಕೊಡುತ್ತೇವೆಂದು ಹೇಳಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಹಣ ವಾಪಸ್ ಪಡೆಯುವಂತೆ ಸಾಕಷ್ಟು ಬಾರಿ ಹೇಳಿದರೂ ಅವರ್ಯಾರು ಬರಲಿಲ್ಲ. ಕಾನೂನು ಕ್ರಮಕ್ಕೆ ಮುಂದಾಗುವಾಗಷ್ಟರಲ್ಲಿ ಯೋಗಿಶ್ವರ್‌ ಹಣ ಹಿಂಪಡೆದರು. ಬಿಜೆಪಿಗೆ ಹೋಗುವ ಆಸೆ ಇದ್ದಿದ್ದರೆ ₹ 25 ಕೋಟಿ ಪಡೆಯುತ್ತಿದ್ದೆ. ಆದರೆ, ಅಂತಹ ಕೆಲಸಕ್ಕೆ ಮುಂದಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅಷ್ಟು ಸ್ಥಾನ ಗಳಿಸಿದ ಮೇಲೆ ಅಧಿಕಾರಕ್ಕೆ ಬರಲಿಲ್ಲವೆಂಬ ಹೊಟ್ಟೆ ಉರಿ ಸಹಜ. ಇನ್ನು 10 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ ಸರ್ಕಾರ ರಚಿಸಬಹುದಿತ್ತು ಎಂಬ ಆಸೆ ಬಿಜೆಪಿಯವರಲ್ಲಿದೆ. ಆ ಕಾರಣಕ್ಕೆ ಸ್ಪೀಕರ್, ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT