ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯವರು ಪುಡಾಂಗು, ಮೋಸಗಾರರು: ಬೈರತಿ ಸುರೇಶ್‌

Published 24 ಮೇ 2024, 15:31 IST
Last Updated 24 ಮೇ 2024, 15:31 IST
ಅಕ್ಷರ ಗಾತ್ರ

ಕೋಲಾರ: ‘ಬಿಜೆಪಿಯವರು ಪುಡಾಂಗುಗಳು. ಸುಳ್ಳು ಹೇಳುವುದರಲ್ಲಿ, ಮೋಸ ಮಾಡುವುದರಲ್ಲಿ ಹಾಗೂ ಯಾಮಾರಿಸುವುದರಲ್ಲಿ ನಿಸ್ಸೀಮರು. ಜೆಡಿಎಸ್‌ನವರು ವೈಯಕ್ತಿಕ ವಿಚಾರದಲ್ಲಿ ಮುಳುಗಿದ್ದಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ‌‌ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಮ್ಮ ಪುತ್ರನ ಶಿಕ್ಷಣ ವಿಚಾರವಾಗಿ ಕೆಲಸದ ಮೇಲೆ ಅಮೆರಿಕಕ್ಕೆ ಹೋಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬೇಗನೇ ವಾಪಸ್‌ ಬರುವಂತೆ ನಾನೇ ಕೇಳಿಕೊಂಡಿದ್ದೇನೆ. ಆದರೆ, ಅವರ ಪ್ರವಾಸ ವಿಚಾರ ಇಟ್ಟುಕೊಂಡು ಬಿಜೆಪಿಯವರು ‌ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಕೊಲೆಗಳಾಗಿದ್ದವು, ಎಷ್ಟು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿತ್ತು ಎಂಬುದನ್ನು ಹೇಳಲು ನಾನು ಹೋಗುವುದಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ತಗ್ಗಿವೆ. ಅಪ್ರಚಾರದಲ್ಲಿ ಬಿಜೆಪಿಯದ್ದು ಎತ್ತಿದ ಕೈ’ ಎಂದು ಹರಿಹಾಯ್ದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಿತ್ತು. ಆಕೆ ರಾತ್ರಿ 9 ಗಂಟೆ ಸಮಯದಲ್ಲಿ ಅಲ್ಲಿಗೆ ಏಕೆ ಹೋಗಿದ್ದರು ಎಂಬುದಾಗಿ ಅಂದಿನ ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಇಂಥ ಬಿಜೆಪಿಯವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನ ಜನಪ್ರಿಯ ಐದು ಗ್ಯಾರಂಟಿ ಯೋಜನೆಗಳನ್ನೇ ಕೆಟ್ಟ ಯೋಜನೆ ಎಂದು ಹೇಳಿದ ಬಿಜೆಪಿಯರು ಸಮಾಜ ವಿರೋಧಿಗಳು. ಬಿಜೆಪಿ ಹಾಗೂ ಜೆಡಿಎಸ್‌ನವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆಯನ್ನು ಅವರು ಕಳೆದುಕೊಂಡಿದ್ದಾರೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT