ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ: ಎಐಸಿಸಿ ಮುಖಂಡ ಕ್ಯಾಪ್ಟನ್‌ ದಾವಲ್‌

ಸಂವಿಧಾನ ಬದಲಿಸಲು ಹೊರಟಿದೆ: ಎಐಸಿಸಿ ಮುಖಂಡ ಕ್ಯಾಪ್ಟನ್‌ ದಾವಲ್‌ ವಾಗ್ದಾಳಿ
Last Updated 15 ನವೆಂಬರ್ 2021, 14:30 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಕಾಂಗ್ರೆಸ್‌ನ ಹಾಗೂ ಇಂದಿರಾಗಾಂಧಿಯವರ ಸಾಧನೆಗಳು ಗೊತ್ತಿಲ್ಲದೆ ಬಿಜೆಪಿಯು ನೈಜ ಇತಿಹಾಸ ತಿರುಚಲು ಹೊರಟಿದೆ’ ಎಂದು ಎಐಸಿಸಿ ಮುಖಂಡ ಕ್ಯಾಪ್ಟನ್‌ ದಾವಲ್‌ ವಾಗ್ದಾಳಿ ನಡೆಸಿದರು.

ಇಲ್ಲಿ ಕಾಂಗ್ರೆಸ್‌ ‍ಪಕ್ಷದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಾಂಗ್ಲಾ ವಿಮೋಚನಾ ದಿನಾಚರಣೆಯಲ್ಲಿ ಮಾತನಾಡಿ, ‘ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಸಕ್ರಿಯವಾಗಿ ಭಾಗವಹಿಸಿತ್ತು. ಜಗತ್ತನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸಲು ಕಾಂಗ್ರೆಸ್ ಪಕ್ಷ ಮತ್ತು ಇಂದಿರಾಗಾಂಧಿ ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಬಿಜೆಪಿಯು ಸುಳ್ಳು ವಿಚಾರಗಳನ್ನು ಹೇಳುತ್ತಿದೆ’ ಎಂದು ದೂರಿದರು.

‘ದೇಶದಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲೇ ಹಲವು ಜನಪರ ಕಾರ್ಯಕ್ರಮ ರೂಪಿಸಲಾಗಿದೆ. ಈ ಸತ್ಯ ತಿಳಿಯದೆ ಬಿಜೆಪಿ ಮುಖಂಡರು ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಅಪಾರವಾದದ್ದು, ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಜಾಗತಿಕವಾಗಿ ಹಲವು ಒಪ್ಪಂದ ಮಾಡಿಕೊಂಡರು’ ಎಂದರು.

‘ಇತಿಹಾಸ ತಿಳಿಯದ ಬಿಜೆಪಿಯು ದೇಶದ ಸಂವಿಧಾನವನ್ನೇ ಬದಲಿಸಲು ಹೊರಟಿದೆ. ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಾಗಿದೆ. ಬಿಜೆಪಿಯನ್ನು ತೊಲಗಿಸಲು ಮತ್ತೊಂದು ಸ್ವಾತಂತ್ರ ಸಂಗ್ರಾಮದ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹೋರಾಟ ರೂಪಿಸಬೇಕು’ ಎಂದು ಕಿವಿಮಾತು ಹೇಳಿದರು.

ದಾರಿ ತಪ್ಪಿಸುತ್ತಿದ್ದಾರೆ: ‘ಬಾಂಗ್ಲಾ ವಿಮೋಚನಾ ಚಳವಳಿಗೆ 50 ವರ್ಷ ಪೂರ್ಣಗೊಂಡಿದೆ. ಈ ಚಳವಳಿಯಿಂದಲೇ ಇಂದಿರಾಗಾಂಧಿ ಅವರಿಗೆ ಹೆಸರು ಬಂದಿತು. ಈ ಚಳುವಳಿಯಿಂದ ಭಾರತದಲ್ಲಿ ಶಾಂತಿ ನೆಲೆಸಲು ಇಂದಿರಾಗಾಂಧಿ ಪ್ರಮುಖ ಕಾರಣಕರ್ತರಾದರು. ಬಿಜೆಪಿ ಮುಖಂಡರು ಸುಳ್ಳುಗಳನ್ನು ನಿಜ ಮಾಡಲು ಹೊರಟಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ ಹಾಗೂ ಕಾಂಗ್ರೆಸ್ ಪಕ್ಷದ ಇತಿಹಾಸ ತಿಳಿಯದೆ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

‘ಯುವಕರಿಗೆ ದೇಶದ ಇತಿಹಾಸ ತಿಳಿಸಬೇಕು. ಚರಿತ್ರೆಯನ್ನು ತಿರುಚಿ ಬೇರೆ ಚರಿತ್ರೆ ಸೃಷ್ಟಿಸುವ ಬಿಜೆಪಿಯ ಸುಳ್ಳುಗಳು ಜನರಿಗೆ ತಿಳಿಯುವಂತೆ ಮಾಡಬೇಕು. ಸತ್ಯ ಹೇಳುವ ಮೂಲಕ ನಿಜ ಸ್ವರೂಪವನ್ನು ಜನರ ಮುಂದಿಡಬೇಕು’ ಎಂದು ಸಲಹೆ ನೀಡಿದರು.

ಜನರಿಗೆ ನೆಮ್ಮದಿಯಿಲ್ಲ: ‘ಇಂದಿರಾಗಾಂಧಿ ನಾಯಕತ್ವದಲ್ಲಿ ಬಾಂಗ್ಲಾ ವಿಮೋಚನಾ ಚಳವಳಿ ನಡೆಯಿತು. ದೇಶದ ಉಳಿವಿಗಾಗಿ ಜಾಗತಿಕವಾಗಿ ಶಾಂತಿ ಸ್ಥಾಪಿಸುವಲ್ಲಿ ಇಂದಿರಾಗಾಂಧಿ ನಿರ್ಣಾಯಕ ಪಾತ್ರ ವಹಿಸಿದರು. ಎಲ್ಲಾ ಜಾತಿ, ಧರ್ಮದವರು ಗಾಂಧೀಜಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯ ದುರಾಡಳಿತದಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ

ಜನರಿಗೆ ನೆಮ್ಮದಿ ಇಲ್ಲವಾಗಿದೆ. ರೈತರು, ಕಾರ್ಮಿಕರು, ಯುವಕರು ನೆಮ್ಮದಿಯಿಂದ ಬದುಕಲು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು’ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ಕೆಜಿಎಫ್ ಶಾಸಕಿ ಎಂ.ರೂಪಕಲಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಉಪಾಧ್ಯಕ್ಷರಾದ ಎಲ್.ಎ.‌ಮಂಜುನಾಥ್, ಮುರಳಿಗೌಡ, ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT