ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಧರಣಿ

ರಾಜ್ಯದಲ್ಲಿ ಆಡಳಿತಾತ್ಮಕ ಅರಾಜಕತೆ ಸೃಷ್ಟಿ: ಧರಣಿನಿರತರ ಆರೋಪ
Last Updated 6 ಮೇ 2019, 13:52 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ಜನರ ಹಿತ ಕಾಪಾಡುವಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಸೋಮವಾರ ಧರಣಿ ನಡೆಸಿದರು.

ನೀರಾವರಿ ಹೋರಾಟ ವೇದಿಕೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ‘ವಿಧಾನಸಭಾ ಚುನಾವಣೆಗೂ ಮುನ್ನ ಹಾದಿ ಬೀದಿಯಲ್ಲಿ ಕಚ್ಚಾಡುತ್ತಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಆಡಳಿತಾತ್ಮಕ ಅರಾಜಕತೆ ಸೃಷ್ಟಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್–ಜೆಡಿಎಸ್ ಶಾಸಕರು ಹಾಗೂ ಸಚಿವರು ಪರಸ್ಪರ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಬೆಳೆ ನಷ್ಟವಾಗಿದ್ದು, ನೀರು ಹಾಗೂ ಮೇವಿನ ಸಮಸ್ಯೆ ಗಂಭೀರವಾಗಿದೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರಿದಂತೆ ಉಭಯ ಪಕ್ಷಗಳ ನಾಯಕರು ಜನರ ಸಮಸ್ಯೆಗೆ ಸ್ಪಂದಿಸದೆ ರೆಸಾರ್ಟ್‌ನಲ್ಲಿ ಮೋಜು ಮಾಡುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಕಿಡಿಕಾರಿದರು.

‘ಸರ್ಕಾರದ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಲಾಗುತ್ತಿದೆ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ದ್ವೇಷ ರಾಜಕಾರಣ: ‘ಗೃಹ ಸಚಿವರು ಗೂಂಡಾ ಸಂಸ್ಕೃತಿ ತೋರುತ್ತಿದ್ದಾರೆ. ಪರಿಸ್ಥಿತಿ ಇದೇ ಮುಂದುವರಿದರೆ ಜನಸಾಮಾನ್ಯರು ರಾಜ್ಯದಲ್ಲಿ ಶಾಂತಿ, ನೆಮ್ಮದಿಯಿಂದ ಇರುವುದು ಕಷ್ಟವಾಗುತ್ತದೆ. ಸಮ್ಮಿಶ್ರ ಸರ್ಕಾರವು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರತಿಪಕ್ಷದ ಶಾಸಕರು ಹಾಗೂ ಮುಖಂಡರನ್ನು ಬೆದರಿಸುವ ಕೃತ್ಯಕ್ಕೆ ಮುಂದಾಗಿದೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಈ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿಯು 2.50 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಅತಿ ದೊಡ್ಡ ಪಕ್ಷವಾಗಿದ್ದು, ಸರ್ಕಾರದ ದಬ್ಬಾಳಿಕೆ ಮುಂದುವರಿಸಿದರೆ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ. ರಾಜ್ಯದೆಲ್ಲೆಡೆ ಬೀದಿಗಿಳಿದು ಹೋರಾಟ ಮಾಡುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ನಗರ ಘಟಕದ ಅಧ್ಯಕ್ಷ ಪಿ.ನಾರಾಯಣಸ್ವಾಮಿ, ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ, ವಿವಿಧ ಘಟಕಗಳ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ವಿಜಯ್‌ಕುಮಾರ್, ಮಮತಾ, ರಾಜೇಶ್ವರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT