ಶುಕ್ರವಾರ, ಜುಲೈ 30, 2021
28 °C

ಕೋಲಾರ: ರಕ್ತದಾನ ಜೀವ ಉಳಿಸುವ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ರಕ್ತದಾನಿಗಳು ಜೀವ ರಕ್ಷಕರು’ ಎಂದು ವೈದ್ಯ ಡಾ.ಚನ್ನಕೇಶವ ಅಭಿಪ್ರಾಯಪಟ್ಟರು.

ಭಾರತೀಯ ರೆಡ್‌ಕ್ರಾಸ್‌ ಜಿಲ್ಲಾ ಸಮಿತಿಯು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿನ ಭೀತಿಯಿಂದಾಗಿ ಎಲ್ಲೆಡೆ ರಕ್ತ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕುಸಿದಿದೆ’ ಎಂದು ಹೇಳಿದರು.

‘ರಕ್ತವು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ರಕ್ತವು ಜೀವ ಉಳಿಸಲು ನೀಡುವ ಉಡುಗೊರೆಯಾಗಿದೆ. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ರಕ್ತದ ಕೊರತೆಯಿಂದ ಆಪತ್ತಿನಲ್ಲಿರುವ ಜೀವಕ್ಕೆ ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಲ್ಲ’ ಎಂದು ತಿಳಿಸಿದರು.

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ಯುವಕ ಯುವತಿಯರು ರಕ್ತದಾನದ ಮಹತ್ವ ಅರಿಯಬೇಕು. ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿರಬೇಕು. ರಕ್ತದಾನದ ಸಂಬಂಧ ಜಾಗೃತಿ ಮೂಡಿಸಬೇಕು. ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು’ ಎಂದು ಕಿವಿಮಾತು ಹೇಳಿದರು.

ಹೃದಯಾಘಾತ ಕಡಿಮೆ

‘ಸ್ವಯಂ ಪ್ರೇರಿತ ರಕ್ತದಾನ ದೇಶದಲ್ಲಿ 1975ರಿಂದ ಆರಂಭವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟು ಮಂದಿಗೆ ರಕ್ತದ ಅವಶ್ಯಕತೆಯಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಬಹುದು. ರಕ್ತದಾನದಿಂದ ವ್ಯಕ್ತಿ ಚುರುಕುಗೊಳ್ಳುವುದರ ಜತೆಗೆ ಹೃದಯಾಘಾತ ಕಡಿಮೆಯಾಗುತ್ತವೆ’ ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಶ್ರೀನಿವಾಸನ್ ವಿವರಿಸಿದರು.

ರಕ್ತದಾನಿಗಳಾದ ಚನ್ನಕೇಶವ, ನರಸಿಂಹಮೂರ್ತಿ, ನಾಗೇಶ್, ಶ್ರೀನಿವಾಸ್‌ಮೂರ್ತಿ, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ.ಪಿ.ಸೋಮಶೇಖರ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು