ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆ ಜಾಗದಲ್ಲಿ ತಂಗುದಾಣ

Last Updated 1 ಸೆಪ್ಟೆಂಬರ್ 2021, 5:18 IST
ಅಕ್ಷರ ಗಾತ್ರ

ಬಂಗಾರಪೇಟೆ: ರಾಜ್ಯ ಹೆದ್ದಾರಿ ಎರಡೂಕಡೆ 40 ಮೀ ಅಂತರದ ಜಾಗ ಸರ್ಕಾರಿ ರಸ್ತೆಗೆ ಸೇರಿದ ಸ್ವತ್ತಾಗಿದ್ದು, ಯಾವುದೇ ನಿರ್ಮಾಣ ಕಾಮಗಾರಿ ನಡೆಸಬಾರದು ಅಥವಾ ನಡೆಸಲು ಅನುಮತಿ ಕೊಡಬಾರದು ಎನ್ನುವ ಆದೇಶವಿದೆ. ಆದರೆ ಪಟ್ಟಣದ ಮೂಲಕ ಹಾದುಹೋಗುವ ಹೊಸಕೋಟೆ-ವೆಂಕಟಗಿರಿ ಕೋಟೆ ರಾಜ್ಯ ಹೆದ್ದಾರಿ-95ರಲ್ಲಿ ಬಹುತೇಕ ಕಡೆ ತಂಗುದಾಣಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ.

ಒಂದೆಡೆ ರಸ್ತೆ ವಿಸ್ತರಣೆಗೆ ಅನುಮೋದನೆ ನೀಡಿ, ಭೂಮಿಪೂಜೆ ನಡೆಸಲಾಗಿದೆ. ಮತ್ತೊಂದೆಡೆ ಅದೇ ರಸ್ತೆ ಅಂಚಿನ 10 ರಿಂದ 15 ಅಡಿ ಅಂತರದಲ್ಲೇ ತಂಗುದಾಣ ನಿರ್ಮಿಸಲಾಗುತ್ತಿದೆ. ವಿಸ್ತರಣೆ ಸಂದರ್ಭ ತಂಗುದಾಣ ಕಟ್ಟಡಗಳು ನೆಲಸಮ ಮಾಡುವುದು
ಅನಿವಾರ್ಯ.

ಕೆಲವೇ ದಿನಗಳಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ ಎನ್ನುವ ವಿಷಯ ತಿಳಿದಿದ್ದರೂ ಇಲ್ಲಿನ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದು, ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಕರ್ನಾಟಕ ಸಿಂಹ ಘರ್ಜನೆ ವೇದಿಕೆ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಬ್ಯಾಟರಾಯನಹಳ್ಳಿ ಎನ್.ಮಂಜುನಾಥ್ ಅವರು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರಿದ್ದಾರೆ.

ಪಟ್ಟಣದ ಹೊರವಲಯದಿಂದ ವಿ.ಕೋಟೆವರೆಗಿನ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆಗಾಗಿ ಈಗಾಗಲೆ ಸುಮಾರು ₹49 ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಈ ಭಾಗದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ ಎಂದು ರಾಜ್ಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಮಧ್ಯದಿಂದ ಎರಡೂ ಕಡೆ 45 ಮೀಟರ್ ವಿಸ್ತೀರ್ಣ ಮತ್ತು ಮುಖ್ಯ ಜಿಲ್ಲಾ ಹೆದ್ದಾರಿ ಎರಡೂಕಡೆ 25 ಮೀಟರ್ ವಿಸ್ತೀರ್ಣದ ಜಾಗ ಆಯಾ ರಸ್ತೆಗೆ ಒಳಪಟ್ಟಿರುತ್ತೆ. ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲು ಅನುಮತಿ ಕೊಡಬಾರದು. ಒಂದು ವೇಳೆ ನಿರ್ಮಿಸಿದ್ದರೆ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮೇ 1998ರಲ್ಲೇ ಸರ್ಕಾರ ಆಯಾ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಗೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಜಾರಿಯಲ್ಲಿರುವದನ್ನು ಪಟ್ಟಣದ ಲೋಕೋಪಯೋಗಿ ಇಲಾಖೆ ಎಇಇ ಅವರೇ ದೃಢಪಡಿಸಿದ್ದು, ಮಾಹಿತಿ ಹಕ್ಕಿನಡಿ ಮಾಹಿತಿ ನೀಡಿದ್ದಾರೆ.

ಆದರೆ ರಾಜ್ಯ ಹೆದ್ದಾರಿ ಇಕ್ಕೆಲ 10-15 ಅಡಿ ಬಿಟ್ಟರೆ ಬಹುತೇಕ ಜಾಗವನ್ನು ಖಾಸಗಿ ಬಡಾವಣೆಗಳು ನುಂಗಿವೆ. ರಸ್ತೆ ಅಂಚಿನ ಜಾಗವನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ಮಾರಾಟ ಮಾಡಲಾಗಿದೆ. ಆ ಜಾಗದಲ್ಲಿ ಕಟ್ಟಡಗಳು ಕೂಡ ತಲೆ ಎತ್ತಿವೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಲೋಕೋಪಯೋಗಿ ಅಧಿಕಾರಿಗಳು ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ.

ಬಂಗಾರಪೇಟೆ ಹೊರವಲಯದಿಂದ ಕೃಷ್ಣಾವರಂವರೆಗೂ ತಿಂಗಳೊಳಗೆ ಜೋಡಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT