ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

CET Result 2024 |ಕೋಲಾರ ಜಿಲ್ಲೆಯ ಕಲ್ಯಾಣ್‌ 4 ವಿಭಾಗದಲ್ಲಿ ಪ್ರಥಮ

ಪಶು ವೈದ್ಯಕೀಯ, ಬಿ.ಫಾರ್ಮಾ, ಫಾರ್ಮಾ ಡಿ, ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಮೊದಲ ರ‍್ಯಾಂಕ್‌
Published 2 ಜೂನ್ 2024, 4:04 IST
Last Updated 2 ಜೂನ್ 2024, 4:04 IST
ಅಕ್ಷರ ಗಾತ್ರ

ಕೋಲಾರ: ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಮುಳಬಾಗಿಲು ತಾಲ್ಲೂಕಿನ ನಂಗಲಿ ಬಳಿಯ ಉಪ್ಪಾರಹಳ್ಳಿ ಗ್ರಾಮದ ವಿ.ಕಲ್ಯಾಣ್‌ ನಾಲ್ಕು ವಿಭಾಗಗಳಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ನಲ್ಲಿ ಪಿಯುಸಿ ಓದಿರುವ ಅವರು, ಪಶು ವೈದ್ಯಕೀಯ (ಬಿ.ವಿ.ಎಸ್ಸಿ), ಬಿ.ಫಾರ್ಮಾ (ಫಾರ್ಮಸಿ), ಫಾರ್ಮಾ ಡಿ (ಫಾರ್ಮಸಿ) ಮತ್ತು ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

‘ರ‍್ಯಾಂಕ್‌ ಪಡೆಯಬೇಕೆಂದು ಪರಿಶ್ರಮ ಹಾಕಿ ಓದಿದ್ದೆ. ಅದಕ್ಕೆ ಪೂರಕವಾಗಿ ಉಪನ್ಯಾಸಕರು ಸಹಾಯ ಮಾಡಿದರು. ಕೋಚಿಂಗ್‌ ಕೂಡ ನೀಡಿದರು. ಪೋಷಕರು ಯಾವುದೇ ಒತ್ತಡ ಹಾಕದೆ ಸಹಕರಿಸಿದರು. ರಾಜ್ಯದಲ್ಲಿ ನಾಲ್ಕು ವಿಭಾಗಗಳಲ್ಲಿ ಮೊದಲ ಸ್ಥಾನ ಬಂದಿರುವುದು ಖುಷಿ ಉಂಟು ಮಾಡಿದೆ’ ಎಂದು ಕಲ್ಯಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲ್ಯಾಣ್‌ ಅವರದ್ದು ಮೂಲತಃ ರೈತ ಕುಟುಂಬ. ಉಪ್ಪಾರಹಳ್ಳಿಯಲ್ಲಿ ಜಮೀನು ಹೊಂದಿದ್ದು ಅವರ ದೊಡ್ಡಪ್ಪಂದಿರು ವ್ಯವಸಾಯ ಮಾಡಿಕೊಂಡಿದ್ದಾರೆ. ತಂದೆ ವಿ.ವೆಂಕಟೇಶಪ್ಪ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೆ.ಆರ್‌.ಪುರಂನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ, ಕಲ್ಯಾಣ್‌ ಎಲ್‌ಕೆಜಿಯಿಂದಲೂ ಬೆಂಗಳೂರಿನಲ್ಲಿ ಓದಿದ್ದಾರೆ. ಪಿಯುಸಿಯಲ್ಲಿ ಪಿಸಿಬಿ ಹಾಗೂ ಪಿಇ ವಿಷಯಗಳನ್ನು ಓದಿದ್ದಾರೆ.

‘ಪುತ್ರ ತುಂಬಾ ಶ್ರಮ ಹಾಕಿ ಓದುತ್ತಾನೆ. ಆ ಶ್ರಮಕ್ಕೆ ಈಗ ಫಲ ದೊರೆತಿದೆ. ಜೊತೆಗೆ ದೇವರ ಆಶೀರ್ವಾದವೂ ಇದೆ. ಗುರಿ ಇಟ್ಟುಕೊಂಡು ಓದಿದ್ದ. ಕಾಲೇಜಿನ ಉಪನ್ಯಾಸಕರ ಸಹಕಾರ ಇದೆ. ನಾವು ಯಾವತ್ತೂ ಒತ್ತಡ ಹೇರಿಲ್ಲ’ ಎಂದು ತಂದೆ ವೆಂಕಟೇಶಪ್ಪ ಹೇಳಿದರು.

ಕಲ್ಯಾಣ್‌ ಅವರ ತಾಯಿ ಲಕ್ಷ್ಮಿ ಗೃಹಿಣಿ. ಸಹೋದರಿ ವಿ.ರೋಹಿತಾ ಎಂಟನೇ ತರಗತಿ ಓದುತ್ತಿದ್ದಾರೆ. ನಾಲ್ಕು ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಬಂದಿದ್ದರೂ ಕಲ್ಯಾಣ್‌ ಗುರಿ ವೈದ್ಯಕೀಯ ಸೀಟಿನತ್ತ ನೆಟ್ಟಿದೆ. ಅದರಲ್ಲೂ ರ‍್ಯಾಂಕ್‌ ತೆಗೆಯುವ ವಿಶ್ವಾಸ ಹೊಂದಿದ್ದಾರೆ.

ಸಮಯ ಉಳಿಸಲು ಹಾಸ್ಟೆಲ್‌ಗೆ ಸೇರಿಸಿದರು!

ಕಲ್ಯಾಣ್‌ ಬೆಂಗಳೂರಿನ ಕೆ.ಆರ್‌.ಪುರಂನಲ್ಲಿದ್ದು ಮಾರತಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ಗೆ ಹೋಗಿ ಬರಲು ಹೆಚ್ಚು ಸಮಯ ಹಿಡಿಯುತಿತ್ತು. ಹೀಗಾಗಿ ಪಿಯುಸಿಯಲ್ಲಿ ಅವರನ್ನು ಪೋಷಕರು ಸಂಸ್ಥೆಯ ಹಾಸ್ಟೆಲ್‌ಗೆ ಸೇರಿಸಿದರು. ‘ಪ್ರಯಾಣದಲ್ಲೇ ಅರ್ಧ ಸಮಯ ಕಳೆದು ಹೋದರೆ ಓದಲು ಸಮಯ ಎಲ್ಲಿ ಸಿಗುತ್ತದೆ? ಹೀಗಾಗಿ ಹಾಸ್ಟೆಲ್‌ಗೆ ಸೇರಿಸಿದೆವು. ಶನಿವಾರ ಭಾನುವಾರ ಮನೆಗೆ ಬರುತ್ತಿದ್ದ’ ಎಂದು ತಂದೆ ವೆಂಕಟೇಶಪ್ಪ ತಿಳಿಸಿದರು.

ಎಂಬಿಬಿಎಸ್‌ ಮಾಡಿ ವೈದ್ಯನಾಗಬೇಕೆಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ನಾನು ನೀಟ್‌ ಪರೀಕ್ಷೆ ಕೂಡ ಬರೆದಿದ್ದು ಅಲ್ಲೂ ರ‍್ಯಾಂಕ್‌ ಗಳಿಸುವ ವಿಶ್ವಾಸದಲ್ಲಿದ್ದೇನೆ.
- ವಿ.ಕಲ್ಯಾಣ್‌, 4 ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿದ್ಯಾರ್ಥಿ
ಪುತ್ರ ಇಟ್ಟುಕೊಂಡಿರುವ ಗುರಿ ಮುಟ್ಟಲು ನಾವು ಪೂರಕವಾಗಿ ಸ್ಪಂದಿಸುತ್ತಿದ್ದೇವೆ. ರಾಜ್ಯದಲ್ಲಿ ಸಿಇಟಿ ಬರೆದ ಸಾವಿರಾರು ವಿದ್ಯಾರ್ಥಿಗಳಲ್ಲಿ ಪುತ್ರ ಮೊದಲ ಸ್ಥಾನ ಗಳಿಸಿದ್ದು ತುಂಬಾ ಖುಷಿ ತಂದಿದೆ.
-ವಿ.ವೆಂಕಟೇಶಪ್ಪ, ಕಲ್ಯಾಣ್‌ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT