ಬುಧವಾರ, ಫೆಬ್ರವರಿ 26, 2020
19 °C

ರಾಸಾಯನಿಕ ಗೊಬ್ಬರ ಬಳಕೆ: ಫಲವತ್ತತೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವುದರಿಂದ ಹಸರಿಕರಣ ನಾಶವಾಗುತ್ತಿದ್ದು, ಪರಿಸರದ ಮೇಲೆ ಪರಿಣಾಮ ಬೀರುತ್ತಿದ್ದು, ಮಣ್ಣಿನ ಆರೋಗ್ಯ ಕಾಪಾಡಲು ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ರಾಷ್ಟ್ರೀಯ ಸ್ವಯಂ ಸೇವಾ ವಿಭಾಗದ ಸಂಯೋಜನಾಧಿಕಾರಿ ಹರೀಶ್ ಸಲಹೆ ನೀಡಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್‌ ಆಶ್ರಯದಲ್ಲಿ ಗುರುವಾರ ನಡೆದ ಮಣ್ಣು ದಿನಾಚರಣೆಯಲ್ಲಿ ಮಾತನಾಡಿ, ‘ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ’ ಎಂದರು.

‘ಇಂತಹ ಮಣ್ಣಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿಲ್ಲ. ಇಳುವರಿ ಕುಸಿತದಿಂದ ಭವಿಷ್ಯದಲ್ಲಿ ಆಹಾರ ಭದ್ರತೆಗೆ ಸಂಚಕಾರ ಎದುರಾಗುತ್ತದೆ. ಆದ ಕಾರಣ ಮಣ್ಣಿಗೆ ರಾಸಾಯನಿಕ ಗೊಬ್ಬರದ ಜತೆಗೆ ಸಾವಯವ ಗೊಬ್ಬರ ಸೇರಿಸಬೇಕು’ ಎಂದು ಹೇಳಿದರು.

‘ಮಣ್ಣು ಭೂಮಿಯ ಮೇಲಿನ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳ ಮಿಶ್ರಣವಾಗಿದೆ. ಸೀಮಿತ ನೈಸರ್ಗಿಕ ಸಂಪನ್ಮೂಲವಾಗಿದೆ. ಈ ನಿಟ್ಟಿನಲ್ಲಿ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು’ ಎಂದು ತಿಳಿಸಿದರು.

ನೆಹರು ಯುವಕೇಂದ್ರದ ಸಹಾಯಕ ನಿರ್ದೇಶಕ ಎನ್.ವೈ.ಸಿ.ಪ್ರವೀಣ್ ಕುಮಾರ್ ಮಾತನಾಡಿ, ‘ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮಣ್ಣಿನಿಂದಲೇ ಆರಂಭವಾಗುತ್ತದೆ. ಮಣ್ಣಿನ ಅಧ್ಯಯನವನ್ನೇ ಜೀವನದ ದೀಕ್ಷೆ ಎಂಬಂತೆ ಸ್ವೀಕರಿಸಿದ ಹಲವು ಮಣ್ಣು ವಿಜ್ಞಾನಿಗಳು ೧೯೨೭ರಲ್ಲೇ ಜಾಗತಿಕ ಮಟ್ಟದಲ್ಲಿ ಮಣ್ಣು ವಿಜ್ಞಾನಿಗಳ ಅಂತರಾಷ್ಟ್ರೀಯ ಒಕ್ಕೂಟವನ್ನು ರಚಿಸಿ, ೨೦೦೨ರ ಡಿಸೆಂಬರ್ ೫ ರಂದು ಮೊದಲ ಮಣ್ಣು ದಿನವನ್ನು ಆಚರಿಸಿದರು’ ಎಂದು ವಿವರಿಸಿದರು.

ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕ ಎಚ್.ಮುನಿಯಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ವಿವಿಧ ಮಣ್ಣುಗಳು ಮತ್ತು ಅದರ ಉಪಯೋಗಗಳ ಬಗ್ಗೆ ಅರಿವನ್ನು ಪಡೆಯಬೇಕು. ಮಣ್ಣಿನ ಸಂರಕ್ಷಣೆಯಿಂದ ಭೂಮಿಯ ಫಲವತ್ತತೆ ಕಾಣಬಹುದು’ ಎಂದರು.

ಮುಖ್ಯೋಪಾದ್ಯಾಯ ಜಿ.ಶ್ರೀನಿವಾಸ್, ಸಹ ಶಿಕ್ಷಕರಾದ ಎಂ.ಆರ್.ಮೀನಾ, ಪಿ.ಎಂ.ಗೋವಿಂದಪ್ಪ, ಕೆ.ಮಮತಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)