ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರಹಳ್ಳಿ ಬೆಟ್ಟ: ₹2.83 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ಡಿ.27ಕ್ಕೆ ಸಿಎಂ ಭೇಟಿ

Published 8 ಡಿಸೆಂಬರ್ 2023, 7:10 IST
Last Updated 8 ಡಿಸೆಂಬರ್ 2023, 7:10 IST
ಅಕ್ಷರ ಗಾತ್ರ

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.27ಕ್ಕೆ ತಾಲ್ಲೂಕಿನ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ತೇರಹಳ್ಳಿ ಬೆಟ್ಟದ ಮುಖ್ಯ ರಸ್ತೆಯನ್ನು ₹ 2.83 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.

ಲೋಕೋಪಯೋಗಿ ಇಲಾಖೆಯು ಈ ಕಾಮಗಾರಿ ನಿರ್ವಹಿಸುತ್ತಿದೆ. ಕೋಲಾರ–ಬೆಂಗಳೂರು ಬೈಪಾಸ್‌ ರಸ್ತೆಯಿಂದ (ಎನ್‌ಎಚ್‌ 75) ಹಿಡಿದು ಬೆಟ್ಟದ ಆದಿಮ ಕೇಂದ್ರವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.

ಪ್ರಮುಖವಾಗಿ ತಡೆ ಗೋಡೆ ನಿರ್ಮಾಣ, ಗುಂಡಿ ಮುಚ್ಚುವುದು, ಮರು ಡಾಂಬರೀಕರಣ, ತಿರುವುಗಳನ್ನು ಸರಿಪಡಿಸುವುದು, ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ, ಜೊತೆಗೆ ಸುರಕ್ಷಿತ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

‘₹ 2.83 ಕೋಟಿ ವೆಚ್ಚದ ಪ್ಯಾಕೇಜ್‌ನಲ್ಲಿ ವಿವಿಧ ಕಾಮಗಾರಿಗಳು ಸೇರಿವೆ. ಕೆಲವೆಡೆ ಸಂಪೂರ್ಣ ಡಾಂಬರು ಕಿತ್ತು ಹೋಗಿದೆ. ಆ ಭಾಗದಲ್ಲಿ ಮರು ಡಾಂಬರೀಕರಣ ಮಾಡಲಾಗುವುದು. ರಸ್ತೆಯಲ್ಲಿನ ಸುರಕ್ಷತೆ ಕಾಮಗಾರಿಗೆ ಒತ್ತು ನೀಡಲಾಗುತ್ತಿದೆ’ ಎಂದು ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್‌ ರಾಮಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ರಸ್ತೆ ಅಭಿವೃದ್ಧಿಪಡಿಸಿ ಹಲವು ವರ್ಷಗಳೇ ಕಳೆದಿವೆ. ಬೆಟ್ಟದಲ್ಲಿನ ದರ್ಗಾ ಬಳಿ ರಸ್ತೆ ಹದಗೆಟ್ಟು ಹೋಗಿದೆ. ಬಹಳ ಕಿರಿದಾಗಿದ್ದು, ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಜೊತೆಗೆ ಅಲ್ಲಲ್ಲಿ ತಡೆಗೋಡೆ ಕಿತ್ತು ಹೋಗಿದೆ.

ಈಗಾಗಲೇ ಬೆಟ್ಟದ ಸುತ್ತಮುತ್ತ ಏಳು ಹಳ್ಳಿಗಳಿದ್ದು, ಬಹಳಷ್ಟು ಮನೆಗಳು ನಿರ್ಮಾಣ ಮಾಡಲಾಗಿದೆ. ರೆಸಾರ್ಟ್‌, ಫಾರ್ಮ್‌ಹೌಸ್‌, ಗೆಸ್ಟ್‌ ಹೌಸ್‌ಗಳಿದ್ದು, ಜನರ ಓಡಾಟ ಹೆಚ್ಚಿದೆ. ಜೊತೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ಕೂಡ ಹೆಚ್ಚಿದ್ದು, ಭೂಮಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಪುರಾತನ ದೇಗುಲಗಳಿದ್ದು, ಸಿನಿಮಾ ಶೂಟಿಂಗ್‌ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು, ಚಾರಣಿಗರ ಹಾಟ್‌ ಫೇವರಿಟ್‌ ಆಗಿದೆ. ಈ ಕಾರಣ ವಾಹನ ಸಂಚಾರ ಹೆಚ್ಚಾಗಿದ್ದು, ಹಲವೆಡೆ ರಸ್ತೆ ಹಾಳಾಗಿದೆ. ಹೀಗಾಗಿ, ಮುಖ್ಯಮಂತ್ರಿ ಕಾರ್ಯಕ್ರಮದ ನೆಪದಲ್ಲಿ ಈಗ ಅಭಿವೃದ್ಧಿ ಭಾಗ್ಯ ಸಿಕ್ಕಿದೆ.

ಈಚೆಗೆ ಸಿದ್ದರಾಮಯ್ಯ ಯರಗೋಳ್‌ ಜಲಾಶಯ ಉದ್ಘಾಟನೆಗೆ ಬಂದಾಗಲೂ ಆ ಭಾಗದ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು.

ತೇರಹಳ್ಳಿ ಬೆಟ್ಟದ ರಸ್ತೆಯ ವಿಹಂಗಮ ನೋಟ
ತೇರಹಳ್ಳಿ ಬೆಟ್ಟದ ರಸ್ತೆಯ ವಿಹಂಗಮ ನೋಟ

ಆದಿಮದಲ್ಲಿ ಮೂರು ದಿನ ಕಾರ್ಯಕ್ರಮ

ಆದಿಮ ಸಾಂಸ್ಕೃತಿಕ ಕೇಂದ್ರದ ‘ಹುಣ್ಣಿಮೆ ಹಾಡು–200’ರ ಪ್ರಯುಕ್ತ ಡಿ.25ರಿಂದ 27ರವರೆಗೆ ಮೂರು ದಿನ ‘ಆದಿಮ ಸಾಂಸ್ಕೃತಿಕ ಯಾನ–200’ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೇ ತೆಲಂಗಾಣ ಆಂಧ್ರ ಕೇರಳ ತಮಿಳುನಾಡು ರಾಜ್ಯಗಳಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಗೋಂಡ್‌ ಆದಿವಾಸಿಗಳ ‘ಗುಸ್ಸಾಡಿ ನೃತ್ಯ’ ಆಂಧ್ರಪ್ರದೇಶದ ಶ್ರೀಕಾಕುಳಂನ ‘ತಪ್ಪೆಟ್ಟುಗುಳ್ಳು’ ತಮಿಳುನಾಡಿನ ‘ಕರಗಾಟ್ಟಂ’ ಕೇರಳದ ‘ತಯ್ಯಾಟಂ–ಕಲರಿಪಟ್ಟು’ ಹಾಗೂ ರಾಜ್ಯದ ಯಕ್ಷಗಾನ ಸೇರಿದಂತೆ ಮೊದಲಾದ ಕಲಾಪ್ರಕಾರಗಳ ಪ್ರದರ್ಶನವಿರಲಿದೆ. ‘ಡಿ.25ರಂದು ಉದ್ಘಾಟನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇತರ ಸಚಿವರು ಬರಲಿದ್ದಾರೆ. ಡಿ.27ರಂದು ಸಮಾರೋಪ ಸಮಾರಂಭಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ’ ಎಂದು ಆದಿಮ ಅಧ್ಯಕ್ಷ ಎನ್‌.ಮುನಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು–ಕೋಲಾರ ರಸ್ತೆಯಿಂದ ಆದಿಮವರೆಗೆ ತೇರಹಳ್ಳಿ ಬೆಟ್ಟದ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಮುಖ್ಯಮಂತ್ರಿ ಭೇಟಿ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಶೀಘ್ರದಲ್ಲೇ ಮುಗಿಯಲಿದೆ.
-ರಾಮಮೂರ್ತಿ, ಕಾರ್ಯಪಾಲಕ ಎಂಜಿನಿಯರ್‌ ಪಿಡಬ್ಲ್ಯುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT