ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಪುನರಾರಂಭ: ಹಾಜರಾತಿ ಕಡಿಮೆ

ಬೆರಳೆಣಿಕೆ ವಿದ್ಯಾರ್ಥಿಗಳು: ನಡೆಯದ ತರಗತಿ
Last Updated 17 ನವೆಂಬರ್ 2020, 16:41 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಕಾರಣಕ್ಕೆ ಸುಮಾರು 9 ತಿಂಗಳಿನಿಂದ ಬಂದ್‌ ಆಗಿದ್ದ ಕಾಲೇಜುಗಳು ಮಂಗಳವಾರ ಪುನರಾರಂಭವಾದವು. ಆದರೆ, ಮೊದಲ ದಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆಯಿತ್ತು.

ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಆರಂಭಿಸಲಾಯಿತು. ಆದರೆ, ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬಂದರು.

ದಿನಕ್ಕೆ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ನಡೆಸುವಂತೆ ಸರ್ಕಾರ ಆದೇಶಿಸಿದೆ. ಉಳಿದ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾರನೆ ದಿನ ತರಗತಿ ನಡೆಸುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ. ದೀರ್ಘ ಕಾಲದ ಬಳಿಕ ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳಲ್ಲಿ ಉತ್ಸಾಹ ಕಾಣಲಿಲ್ಲ.

ಬಹುತೇಕ ಕಾಲೇಜುಗಳಲ್ಲಿ ಶೇ 5ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾದರು. ಕೋವಿಡ್‌ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಕಾಲೇಜಿನ ಪ್ರತಿ ಕೊಠಡಿಯನ್ನು ಬೆಳಿಗ್ಗೆಯೇ ಸ್ವಚ್ಛಗೊಳಿಸಿ ಸ್ಯಾನಿಟೈಸ್‌ ಮಾಡಲಾಯಿತು.

ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ ಕಾಲೇಜಿಗೆ ಬಂದಿದ್ದರು. ಕಾಲೇಜುಗಳ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್‌ ಹಾಕಲಾಯಿತು. ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ತರಗತಿಗಳಲ್ಲಿ ಮೇಜುಗಳ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನವಾದ ಕಾರಣ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದ್ದ ಕಾರಣಕ್ಕೆ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ.

ಕೋವಿಡ್‌ ಪರೀಕ್ಷೆ: ಸರ್ಕಾರ ಕೋವಿಡ್ ಪರೀಕ್ಷೆಯ ವರದಿ ನೀಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಯೇ ಕಾಲೇಜುಗಳಿಗೆ ಬಂದು ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಿದರು. ವರದಿಯಲ್ಲಿ ನೆಗೆಟಿವ್ ಬಂದರೆ ಮಾತ್ರ ಕಾಲೇಜಿಗೆ ಹಾಜರಾಗುವಂತೆ ಸೂಚಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು.

ವಿದ್ಯಾರ್ಥಿಗಳ ಜತೆಗೆ ಕಾಲೇಜು ಸಿಬ್ಬಂದಿಗೂ ಕೋವಿಡ್‌ ಪರೀಕ್ಷೆ ಮಾಡಲಾಯಿತು. ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸುವ ಬಗ್ಗೆ ಪೋಷಕರ ಒಪ್ಪಿಗೆ ಪತ್ರ ಪಡೆಯಲಾಯಿತು. ಪೋಷಕರಿಂದ ಒಪ್ಪಿಗೆ ಪತ್ರ ಪಡೆಯದೆ ಬಂದಿದ್ದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿ ನಡೆಸುವುದಾಗಿ ಹೇಳಿ ವಾಪಸ್‌ ಕಳುಹಿಸಲಾಯಿತು.

ಡಿ.ಸಿ ಪರಿಶೀಲನೆ: ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲಾ ಕೇಂದ್ರದ ಸರ್ಕಾರಿ ಮಹಿಳಾ ಕಾಲೇಜಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಂಗಳವಾರ ದಿಢೀರ್‌ ಭೇಟಿ ನೀಡಿ ಸುರಕ್ಷತಾ ಕ್ರಮ ಕೈಗೊಂಡಿರುವುದನ್ನು ಪರಿಶೀಲಿಸಿದರು.

ಕಾಲೇಜು ಆರಂಭಕ್ಕೆ ಕನಿಷ್ಠ ಸಿದ್ಧತೆ ಸಹ ಮಾಡದಿರುವುದನ್ನು ಕಂಡು ಸಿಡಿಮಿಡಿಗೊಂಡ ಜಿಲ್ಲಾಧಿಕಾರಿಯು ಪ್ರಾಂಶುಪಾಲ ಗಂಗಾಧರರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘3 ದಿನ ರಜೆ ಸಂದರ್ಭದಲ್ಲಿ ಏಕೆ ಕಾಲೇಜು ಸ್ವಚ್ಛ ಮಾಡಿಸಿಲ್ಲ. ಕಾಲೇಜಿನ ಬಗ್ಗೆ ನಿಮಗೆ ಆಸಕ್ತಿಯಿಲ್ಲ’ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ವರದಿಯೊಂದಿಗೆ ಕಾಲೇಜಿಗೆ ಬರಬೇಕಿತ್ತು. ಆದರೆ, ಯಾರೊಬ್ಬರೂ ಕೋವಿಡ್‌ ಪರೀಕ್ಷೆ ಮಾಡಿಸಿಲ್ಲ. ನೀವು ಕೋವಿಡ್‌ ಪರೀಕ್ಷೆ ಸಂಬಂಧ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿಲ್ಲ. ನಾವೇ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಬೇಕೆ?’ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದಾಗಲೂ ಇದೇ ಪರಿಸ್ಥಿತಿ ಕಂಡುಬಂತು. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿಯು ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT