ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾಸ್ನೇಹಿ ವ್ಯವಸ್ಥೆ ಸೃಷ್ಟಿಗೆ ಬದ್ಧ

ಸಭೆಯಲ್ಲಿ ಕೈಗಾರಿಕೆಗಳಿಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭರವಸೆ
Last Updated 6 ಏಪ್ರಿಲ್ 2021, 14:38 IST
ಅಕ್ಷರ ಗಾತ್ರ

ಕೋಲಾರ: ‘ಕೈಗಾರಿಕೆಗಳಿಗೆ ಅನಗತ್ಯವಾಗಿ ತೊಂದರೆ ಕೊಡುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಹೆದರುವ ಅಗತ್ಯವಿಲ್ಲ. ಕೈಗಾರಿಕಾಸ್ನೇಹಿ ವ್ಯವಸ್ಥೆ ಸೃಷ್ಟಿಗೆ ಪೊಲೀಸ್‌ ಇಲಾಖೆ ಬದ್ಧವಾಗಿದೆ’ ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಭರವಸೆ ನೀಡಿದರು.

ಕೈಗಾರಿಕೆಗಳಲ್ಲಿ ಭದ್ರತೆ ಮತ್ತು ಸುರಕ್ಷತೆ ವಿಚಾರವಾಗಿ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಕೈಗಾರಿಕೆಗಳ ಬಳಿ ಬಂದು ಬೆದರಿಕೆ ಹಾಕಿ ಜಗಳವಾಡುವ ಸಂಘಟನೆಗಳ ಸದಸ್ಯರಿಗೆ ಕಾನೂನು ಚೌಕಟ್ಟಿನಲ್ಲೇ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಕೋಟಿ ಬಂಡವಾಳ ಹಾಕಿ ಕೈಗಾರಿಕೆಗಳನ್ನು ಆರಂಭಿಸಿವೆ. ಇದರಿಂದ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಿವೆ. ಕೈಗಾರಿಕೆಗಳ ಹಿತ ಕಾಪಾಡುವುದು ಸರ್ಕಾರದ ಹಾಗೂ ಇಲಾಖೆಯ ಜವಾಬ್ದಾರಿ. ಇದರಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದರು.

‘ಕೈಗಾರಿಕೆಗಳಲ್ಲಿ ಕಾರ್ಮಿಕ ಕಾನೂನುಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಕೈಗಾರಿಕೆಗಳ ಆಡಳಿತ ಮಂಡಳಿಯು ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಕೈಗಾರಿಕೆಗಳಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ, ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಬಗೆಹರಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಭವಿಷ್ಯದ ಆತಂಕ ಹೊತ್ತು ದೇಶದ ಪ್ರಗತಿಗಾಗಿ ಹಾಗೂ ಜೀವನ ನಿರ್ವಹಣೆಗಾಗಿ ಶ್ರಮಿಸುತ್ತಿರುವ ಕಾರ್ಮಿಕರ ರಕ್ಷಣೆ ಮುಖ್ಯ. ಕಾರ್ಮಿಕರು ಹಾಗೂ ಕೈಗಾರಿಕೆಗಳು ಉತ್ತಮ ಸಮಾಜಕ್ಕೆ ಪರಸ್ಪರ ಹೊಂದಾಣಿಕೆಯಿಂದ ಹೋಗಬೇಕು. ಆಡಳಿತ ಮಂಡಳಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಕೈಗಾರಿಕೆಗಳಿಗೆ ಸಮಸ್ಯೆ ಎದುರಾದರೆ ಸ್ಥಳೀಯ ಪೊಲೀಸರೊಂದಿಗೆ ಮುಕ್ತವಾಗಿ ಚರ್ಚಿಸಬೇಕು’ ಎಂದು ಸಲಹೆ ನೀಡಿದರು.

ಗ್ರಾಮ ಅಭಿವೃದ್ಧಿಪಡಿಸಿ: ‘ಕೈಗಾರಿಕೆಗಳು ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಅಕ್ಕಪಕ್ಕದ ಗ್ರಾಮಗಳನ್ನು ಅಭಿವೃದ್ಧಿಪಡಿಸಿ. ಇದರಿಂದ ಸ್ಥಳೀಯರಿಗೆ ಕೈಗಾರಿಕೆಗಳ ಮೇಲೆ ಗೌರವ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೈಗಾರಿಕೆಗಳಲ್ಲಿ ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಬೇಕು. ವ್ಯವಸ್ಥೆ ಹಾಳು ಮಾಡಲು ಒಬ್ಬ ಕೆಟ್ಟ ಕಾರ್ಮಿಕ ಸಾಕು. ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗಿ ಕಡ್ಡಾಯವಾಗಿ ಪೊಲೀಸರಿಂದ ಅವರ ಪೂರ್ವಾಪರ ಪರಿಶೀಲನೆ ಮಾಡಿಸಿ ದೃಢೀಕರಣ ಪತ್ರ ಪಡೆಯಬೇಕು’ ಎಂದು ಸೂಚಿಸಿದರು.

ಠಾಣೆಗೆ ಪ್ರಸ್ತಾವ: ‘ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಕಂಪನಿಗಳಿವೆ. ಜತೆಗೆ ಈ ಭಾಗದಲ್ಲಿ ಜನವಸತಿ ಹೆಚ್ಚಿದೆ. ಹೀಗಾಗಿ ಇಲ್ಲಿ ಹೊಸ ಪೊಲೀಸ್‌ ಠಾಣೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೈಗಾರಿಕೆಗಳ ಆಡಳಿತ ಮಂಡಳಿಯು ಸ್ಥಳೀಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು’ ಎಂದು ತಿಳಿಸಿದರು.

‘ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಮತ್ತು ಅಪಘಾತ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಕ್ಕಪಕ್ಕದ ಜಿಲ್ಲೆಗಳ ಪೊಲೀಸರೊಂದಿಗೆ ಸಭೆ ನಡೆಸುತ್ತೇವೆ. ರಾತ್ರಿ ಪಾಳಿಯಲ್ಲಿ ಗಸ್ತು ಹೆಚ್ಚಿಸುತ್ತೇವೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹಮ್ಮದ್ ಇರ್ಫಾನ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್‌, ಹೋಂಡಾ ಕಂಪನಿ (ಆಪರೇಷನ್ಸ್‌) ಮುಖ್ಯಸ್ಥ ಸುನಿಲ್‌ಕುಮಾರ್ ಮಿತ್ತಲ್, ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT