ಮಂಗಳವಾರ, ಮೇ 24, 2022
30 °C
ಪ್ರವೀಣ್‍ಗೌಡಗೆ ಉತ್ತಮ ಭವಿಷ್ಯವಿದೆ: ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಹೇಳಿಕೆ

ಉಪಾಧ್ಯಕ್ಷರ ಪದಚ್ಯುತಿಗೆ ಕಾಂಗ್ರೆಸ್‌–ಬಿಜೆಪಿ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಗರಸಭೆಯಲ್ಲಿ ಜೆಡಿಎಸ್‍ನ ಪ್ರವೀಣ್‍ಗೌಡ ಅವರು ಉಪಾಧ್ಯಕ್ಷಗಾದಿ ಕಳೆದುಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರೇ ಕಾರಣ. ಪ್ರವೀಣ್‌ಗೌಡರ ಪದಚ್ಯುತಿ ತಡೆಯಲು ನಾನು ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ವಿಫಲವಾಯಿತು’ ಎಂದು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಗೋವಿಂದರಾಜು ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರವೀಣ್‌ಗೌಡರ ವಿರುದ್ಧ 6 ತಿಂಗಳಿಂದಲೂ ಅವಿಶ್ವಾಸ ನಿರ್ಣಯಕ್ಕೆ ಪ್ರಯತ್ನ ನಡೆಯುತ್ತಿತ್ತು. ನಾನೇ 2 ಬಾರಿ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಿ ಸಮಸ್ಯೆ ಬಗೆಹರಿಸಿದ್ದೆ’ ಎಂದರು.

‘ನಗರೋತ್ಥಾನದ ₹ 40 ಕೋಟಿ ಜತೆಗೆ ಬೇರೆ ಯೋಜನೆಯಿಂದ ಬಂದಿದ್ದ ₹ 5 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸುವಲ್ಲಿ ತಾರತಮ್ಯ ಆಗಿತ್ತು. ಆಗಲೂ ನಾನು ಎಸ್‍ಡಿಪಿಐ ಸದಸ್ಯರ ವಾರ್ಡ್‍ಗಳಿಗೆ ತಲಾ ₹ 5 ಲಕ್ಷ ಅನುದಾನ ನೀಡಿ ಉಪಾಧ್ಯಕ್ಷರಿಗೆ ಬೆಂಬಲ ನೀಡುವಂತೆ ಕೋರಿದ್ದೆ. ಇಷ್ಟೆಲ್ಲಾ ಪ್ರಯತ್ನದ ನಂತರವೂ ವಿಪ್ ಜಾರಿ ಮಾಡಲಾಯಿತು. ಶಾಸಕನಾದ ನನಗೂ ವಿಪ್ ಜಾರಿ ಮಾಡಿದ್ದರಿಂದ ಬೇಸರವಾಗಿ ಸುಮ್ಮನಾದೆ’ ಎಂದು ತಿಳಿಸಿದರು.

‘ಅವಿಶ್ವಾಸ ನಿರ್ಣಯದ ವಿಚಾರವಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದಾಗ ಪ್ರವೀಣ್‍ಗೌಡರನ್ನೇ ಮುಂದುವರಿಸುವಂತೆ ಸೂಚಿಸಿದ್ದರು. ಆದರೆ, ನಮ್ಮದೇ ಪಕ್ಷದವರಾದ ನಗರಸಭೆ ಅಧ್ಯಕ್ಷೆ ಶ್ವೇತಾ ಮತ್ತು ಪ್ರವೀಣ್‌ಗೌಡರು ಪರಸ್ಪರ ನಂಬಿಕೆಯಿಲ್ಲದೆ ಈ ರೀತಿ ಮಾಡಿಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹೃದಯ ಕೊಟ್ಟಿಲ್ಲವಷ್ಟೇ: ‘ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಶ್ರೀನಿವಾಸಗೌಡರ ಗೆಲುವಿಗೆ ತನು, ಮನ, ಧನ ಎಲ್ಲವನ್ನೂ ಅರ್ಪಿಸಿದ್ದೇನೆ. ಹೃದಯ ಮತ್ತು ಕಿಡ್ನಿ ಮಾತ್ರ ಕೊಟ್ಟಿಲ್ಲವಷ್ಟೇ. ಆದರೂ ಅವರ ಕಾಂಗ್ರೆಸ್‍ನತ್ತ ಹೋಗಿದ್ದಾರೆ. ಹೀಗಿರುವಾಗ ನಾನು ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಬಂದು ಶ್ರೀನಿವಾಸಗೌಡರು ಕಾಂಗ್ರೆಸ್ ಪರ ಕೈ ಎತ್ತುವುದನ್ನು ನೋಡಬೇಕಿತ್ತಾ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಪ್ರವೀಣ್‍ಗೌಡರನ್ನು ಉಪಾಧ್ಯಕ್ಷರಾಗಿ ಮುಂದುವರಿಸಲು ಶಾಸಕರನ್ನು ಹೊರತುಪಡಿಸಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೂ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. ಕಾಂಗ್ರೆಸ್‍ನವರ ತೀಟೆ ಎಲ್ಲರಿಗೂ ಗೊತ್ತಿದೆ. ಅವರಿಂದಲೇ ನಗರಸಭೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಈ ದುಸ್ಥಿತಿ ಬಂದಿದ್ದು, ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಪ್ರವೀಣ್‍ಗೌಡರಿಗೆ ಉತ್ತಮ ಭವಿಷ್ಯವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಗ್ಲಿ ಪ್ರಕಾಶ್‌ ಯಾರು?; ‘ಕೋಲಾರ ಕ್ಷೇತ್ರದಲ್ಲಿ ಸಂದರ್ಭಕ್ಕೆ ತಕ್ಕಂತೆ ಪಕ್ಷಗಳ ಹಿಂದೆ ಸುತ್ತಾಡುವವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‍ನ ಮನೆ ಬಾಗಿಲು ತಟ್ಟುತ್ತಿದ್ದರೂ ತಮ್ಮನ್ನು ಕ್ಯಾರೇ ಎಂದಿಲ್ಲ ಎಂದು ಬೆಗ್ಲಿ ಪ್ರಕಾಶ್ ಹೇಳಿಕೊಂಡಿದ್ದಾರೆ. ಅವರು ವರ್ತೂರು ಪ್ರಕಾಶ್ ವಿಚಾರಕ್ಕೆ ಏನಾದರೂ ಮಾತನಾಡಿಕೊಳ್ಳಲಿ. ಆದರೆ, ಜೆಡಿಎಸ್ ವಿಚಾರ ಅವರಿಗೆ ಯಾಕೆ ಬೇಕು? ಇಷ್ಟಕ್ಕೂ ಬೆಗ್ಲಿ ಪ್ರಕಾಶ್‌ಗೂ ನಮ್ಮ ಪಕ್ಷಕ್ಕೂ ಏನು ಸಂಬಂಧ?’ ಎಂದು ಪ್ರಶ್ನಿಸಿದರು.

‘ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ ಅವರು ಜೆಡಿಎಸ್ ಸೇರ್ಪಡೆಯಾಗುವ ಸಂಗತಿ ನನಗೆ ಗೊತ್ತಿಲ್ಲ. ಪಕ್ಷದ ವರಿಷ್ಠರು ಆ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಜೆಡಿಎಸ್ ಪಕ್ಷವನ್ನು 2023ರಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಿಷನ್ 123 ಗುರಿಯಾಗಿಸಿಕೊಂಡಿದ್ದೇವೆ. ಏ.16ಕ್ಕೆ ಜನತಾ ಜಲಧಾರೆ ಅಭಿಯಾನಕ್ಕೆ ಚಾಲನೆ ಸಿಗಲಿದೆ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ಪಕ್ಷದ ಮುಖಂಡರಾದ ರಾಮು, ಸಿಎಂಆರ್ ಶ್ರೀನಾಥ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು