ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮೌನ ಪ್ರತಿಭಟನೆ

ಸೋನಿಯಾ ಗಾಂಧಿ ವಿಚಾರಣೆಗೆ ಕೈ ಮುಖಂಡರ ಖಂಡನೆ
Last Updated 28 ಜುಲೈ 2022, 4:42 IST
ಅಕ್ಷರ ಗಾತ್ರ

ಕೋಲಾರ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ನಗರದ ಗಾಂಧಿವನದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್‌ ಕುಮಾರ್‌, ‘ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ ವಿರುದ್ಧ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಇಂಥ ಬೆದರಿಕೆಗೆ ಕಾಂಗ್ರೆಸ್‌ ಕಾರ್ಯಕರ್ತರು ಬಗ್ಗುವುದಿಲ್ಲ. ಕಾರ್ಯಕರ್ತರು ಹಾಗೂ ನಾಯಕರು ಮತ್ತಷ್ಟು ಬಲಿಷ್ಠವಾಗುತ್ತಾರೆ’ ಎಂದರು.

ಬಂಗಾರಪೇಟೆ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ, ‘ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಶ್ನೆ ಮಾಡುತ್ತಾರೆಂದು ವಿನಾಕಾರಣ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಮನ್ಸ್ ನೀಡಿ ವಿಚಾರಣೆ ನಡೆಸುವುದು ಪದ್ಧತಿ. ಆದರೆ, ಪ್ರಜಾಪ್ರಭುತ್ವಕ್ಕೆ ಅಗೌರವ ತರುವ ನಿಟ್ಟಿನಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಮಾತನಾಡಿ, ‘ಪ್ರಕರಣ ಮುಗಿದ ಅಧ್ಯಯವಾಗಿದ್ದರೂ ಬಿಜೆಪಿ ದುರುದ್ದೇಶಪೂರ್ವಕವಾಗಿ ನೋಟಿಸ್ ನೀಡಿ ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಒಳಪಡಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಮೊದಲು ರಾಹುಲ್‌ ಗಾಂಧಿ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದು ದಿನ 50 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿತ್ತು’ ಎಂದರು.

‘ಪದೇ ಪದೇ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸಿಗರನ್ನು ಮುಜುಗರಕ್ಕೀಡು ಮಾಡುವ ಕೆಲಸವನ್ನು ಮೋದಿ‌ ನೇತೃತ್ವದ ಸರ್ಕಾರ ಮಾಡುತ್ತಿದೆ’ ಎಂದು ದೂರಿದರು.‌

ಶಾಸಕ ಕೆ. ಶ್ರೀನಿವಾಸಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀಸಂದ್ರ ಗೋಪಾಲಗೌಡ, ನಗರಸಭೆ ಉಪಾಧ್ಯಕ್ಷ ಅಸ್ಲಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಅಂಬರೀಷ್‌, ಪಕ್ಷದ ವಿವಿಧ ಘಟಕದ ಮುಖಂಡರಾದ ಊರಬಾಗಿಲು ಶ್ರೀನಿವಾಸ್, ಜಯದೇವ್, ಪ್ರಸಾದ್ ಬಾಬು, ರತ್ನಮ್ಮ, ರಾಜು ಶ್ರೀನಿವಾಸಪ್ಪ, ನಂದಿನಿ ಪ್ರವೀಣ್, ನೀಲಕಂಠಗೌಡ, ರಾಜೇಂದ್ರಗೌಡ, ಮಂಜುನಾಥ್, ಚಂಜಿಮಲೆ ರಮೇಶ್‌, ಜನಪನಹಳ್ಳಿ ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT