* ಶ್ರೀನಿವಾಸಪುರ: ಕೆ.ಆರ್.ರಮೇಶ್ ಕುಮಾರ್.
* ಮಾಲೂರು: ಕೆ.ವೈ.ನಂಜೇಗೌಡ.
* ಕೆಜಿಎಫ್: ರೂಪಕಲಾ ಶಶಿಧರ್.
ಬಂಗಾರಪೇಟೆ; * ಎಸ್.ಎನ್.ನಾರಾಯಣಸ್ವಾಮಿ.
* ಕೋಲಾರ: ?
* ಮುಳಬಾಗಿಲು: ?
ಕೋಲಾರ: ಕೋಲಾರ ಜಿಲ್ಲೆಯ ಒಟ್ಟು ಆರು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಹಾಲಿ ಶಾಸಕರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ಘೋಷಿಸಿದೆ. ಇನ್ನೆರಡು ಕ್ಷೇತ್ರಗಳಾದ ಕೋಲಾರ ಹಾಗೂ ಮುಳಬಾಗಿಲಿನಲ್ಲಿ ಕುತೂಹಲ ಮೂಡಿಸಿದೆ.
ಶ್ರೀನಿವಾಸಪುರದಲ್ಲಿ ಕೆ.ಆರ್.ರಮೇಶ್ ಕುಮಾರ್, ಮಾಲೂರಿನಲ್ಲಿ ಕೆ.ವೈ.ನಂಜೇಗೌಡ, ಕೆಜಿಎಫ್ ನಲ್ಲಿ ರೂಪಕಲಾ ಶಶಿಧರ್ ಹಾಗೂ ಬಂಗಾರಪೇಟೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಲಭಿಸಿದೆ.
ಮೀಸಲು ಕ್ಷೇತ್ರ ಮುಳಬಾಗಿಲಿನಲ್ಲಿ ಯಾರಿಗೂ ಘೋಷಿಸಿಲ್ಲ. ಪ್ರಬಲ ಆಕಾಂಕ್ಷಿಯಾಗಿರುವ ಕೊತ್ತನೂರು ಮಂಜುನಾಥ್ ಅವರಿಗೆ ಸಂಬಂಧಿಸಿದ ಜಾತಿ ಪ್ರಕರಣ ನ್ಯಾಯಾಲಯದಲ್ಲಿದೆ. ಅವರ ಬೆಂಬಲಿಗ ಅಂಜೂಬಾಸ್ ಎಂಬುವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೊತ್ತನೂರು ಮಂಜುನಾಥ್ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಮುಳಬಾಗಿಲು ಕ್ಷೇತ್ರದಿಂದ ಗೆದ್ದಿದ್ದ ಎಚ್.ನಾಗೇಶ್ ಈಚೆಗೆ ಕಾಂಗ್ರೆಸ್ ಸೇರಿದ್ದರು.
ಇನ್ನು ಕೋಲಾರ ಕ್ಷೇತ್ರ ಖಾಲಿ ಬಿಟ್ಟಿದ್ದು ಗೊಂದಲ ಮುಂದುವರಿದಿದೆ. ವರುಣಾ ಜೊತೆಗೆ ಈ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಸುಳಿವನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿದ್ದಾರೆ.
ಆಕಸ್ಮಾತ್ ಸಿದ್ದರಾಮಯ್ಯ ಕೋಲಾರ ಬದಲು ಹಾಲಿ ಕ್ಷೇತ್ರ ಬಾದಾಮಿ ಆಯ್ಕೆ ಮಾಡಿಕೊಂಡರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಈಗಾಗಲೇ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧೆ ಸಂಬಂಧ ಮಾತನಾಡಿದ್ದಾರೆ. ಹಲವು ಸಮೀಕ್ಷೆ ಬಳಿಕ ಕೋಲಾರ ಸುರಕ್ಷಿತವಲ್ಲ ಎಂಬ ಸಲಹೆಯನ್ನು ರಾಹುಲ್ ಗಾಂಧಿ ಈಚೆಗೆ ಸಿದ್ದರಾಮಯ್ಯ ಅವರಿಗೆ ನೀಡಿದ್ದರು. ಹೀಗಾಗಿ, ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ. ಆದರೆ, ಸಿದ್ದರಾಮಯ್ಯ ಅವರೇ ಸ್ಪರ್ಧಿಸಲಿದ್ದಾರೆ ಎಂಬ ಆಶಾವಾದದಲ್ಲಿ ಸ್ಥಳೀಯ ನಾಯಕರು ಇದ್ದಾರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.