ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ: ರಾಣಿ ಸತೀಶ್‌

ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ರಾಣಿ ಸತೀಶ್‌ ವಿಶ್ವಾಸ
Last Updated 31 ಮೇ 2020, 14:04 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಗಲು ಕೊಟ್ಟು ದುಡಿಯಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ರಾಣಿ ಸತೀಶ್‌ ಕಿವಿಮಾತು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಪದಗ್ರಹಣ ಸಮಾರಂಭ ಸಂಬಂಧ ಇಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ರಾಜ್ಯದಲ್ಲಿ ಸಶಕ್ತವಾಗಿದೆ. ಕೆಪಿಸಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭವನ್ನು ಮನೆ ಮನೆಗೆ ತಲುಪಿಸಬೇಕು’ ಎಂದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ಶಿವಕುಮಾರ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಅವರ ಪದಗ್ರಹಣ ಸಮಾರಂಭವನ್ನು ಸುಮಾರು 4 ಲಕ್ಷ ಜನ ವೀಕ್ಷಣೆ ಮಾಡಲು ಸಿದ್ಧತೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಇಡೀ ಜಗತ್ತು ತಲ್ಲಣಗೊಂಡಿದೆ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ವೀಕ್ಷಣೆ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಿ ಮತ್ತು ಕಡ್ಡಾಯವಾಗಿ ಮಾಸ್ಕ್‌ ಧರಿಸಿ. ಪಕ್ಷದ ಕಾರ್ಯಕರ್ತರು ಮುಖಂಡರ ಬೆಂಬಲಕ್ಕೆ ನಿಂತು ದುಡಿದರೆ ಪಕ್ಷ ಸಂಘಟನೆ ಬಲಗೊಳ್ಳುತ್ತದೆ’ ಎಂದು ಸಲಹೆ ನೀಡಿದರು.

‘ಕೆಪಿಸಿಸಿ ಅಧ್ಯಕ್ಷರು ಅಧಿಕಾರ ಸ್ವೀಕರಿಸುವ ವೇಳೆ ಕಾರ್ಯಕರ್ತರು ಸ್ಥಳೀಯವಾಗಿ ವಾರ್ಡ್‌ಗಳಲ್ಲಿ ಮುಂದಾಳತ್ವ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ. ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ. ಯಾವುದೇ ಗೊಂದಲಕ್ಕೆ ಆಸ್ಪದ ನೀಡಬೇಡಿ’ ಎಂದು ಪಕ್ಷದ ನಗರ ಉಸ್ತುವಾರಿ ವಸಂತ ಕವಿತಾ ರೆಡ್ಡಿ ಸೂಚಿಸಿದರು.

ಕೊರೊನಾ ಭೀತಿ: ‘2 ಲಕ್ಷ ಕಾರ್ಯಕರ್ತರನ್ನು ಸೇರಿಸಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪದಗ್ರಹಣ ಸಮಾರಂಭ ನಡೆಸಲು ಕೆಪಿಸಿಸಿ ಅಧ್ಯಕ್ಷರು ಉದ್ದೇಶಿಸಿದ್ದರು. ಆದರೆ, ಕೊರೊನಾ ಭೀತಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಪದಗ್ರಹಣ ಸಮಾರಂಭದ ನೇರ ವೀಕ್ಷಣೆ ಮೂಲಕ ಜನರಿಗೆ ತಲುಪಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಸೈಯ್ಯದ್‌ ಜಮೀರ್‌ ಪಾಷಾ ಮನವಿ ಮಾಡಿದರು.

ಕಾರ್ಯಕರ್ತರು ಸ್ಥಾನಮಾನ ತ್ಯಾಗ ಮಾಡಿದರೆ ಪಕ್ಷಕ್ಕೆ ಬಲ ಬರುತ್ತದೆ. ಪಕ್ಷಕ್ಕೆ ಬಲ ತುಂಬಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಕಾರ್ಯಕರ್ತರಯ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಬೇಕು. ಪಕ್ಷವು ಭವಿಷ್ಯದಲ್ಲಿ ದೊಡ್ಡ ಹೋರಾಟ ನಡೆಸಲಿದೆ. ನೂತನ ಅಧ್ಯಕ್ಷರು ಸ್ಥಳೀಯವಾಗಿ ನಾಯಕತ್ವ ಬೆಳೆಸಲು ಅಧಿಕಾರ ವಿಕೇಂದ್ರೀಕರಣಗೊಳಿಸುತ್ತಾರೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್, ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಕ್ಬಾಲ್ ಅಹಮ್ಮದ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT