ಬುಧವಾರ, ಜೂನ್ 23, 2021
28 °C
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಭರವಸೆ

ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಸಹಿತವಾದ 1 ಸಾವಿರ ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆ ನಿರ್ಮಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಭರವಸೆ ನೀಡಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲೆಯ ಬಡ ಜನರ ನರಳಾಟ ನೋಡಿ ಮನಕಲಕಿದೆ. ಜನರ ನೋವು ನೋಡಲಾಗದೆ ಒಂದು ವರ್ಷದೊಳಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಸಂಕಲ್ಪ ಮಾಡಿದ್ದೇನೆ. ಸರ್ಕಾರದ ಜತೆಗೆ ಕೈಜೋಡಿಸಿ ಈ ಕಾರ್ಯ ಪೂರ್ಣಗೊಳಿಸುವುದು ನನ್ನ ಜೀವನದ ಗುರಿ’ ಎಂದು ತಿಳಿಸಿದರು.

‘ಆಸ್ಪತ್ರೆ ನಿರ್ಮಾಣದ ಮಹಾ ಕಾರ್ಯಕ್ಕೆ ನನ್ನ ಆಸ್ತಿ ಮಾರಾಟ ಮಾಡಲು ಸಿದ್ಧನಿದ್ದೇನೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ದಾನಿಗಳ ನೆರವು ಪಡೆಯುತ್ತೇನೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳಿಲ್ಲ. ಸ್ಥಳೀಯ ಜನಸಂಖ್ಯೆಗೆ ಮತ್ತು ಕೈಗಾರಿಕೆಗಳಿಗಾಗಿ ವಲಸೆ ಬಂದಿರುವ ಕಾರ್ಮಿಕರಿಗೆ ಆಸ್ಪತ್ರೆಯ ಅನುಕೂಲ ಸಾಕಾಗುತ್ತಿಲ್ಲ’ ಎಂದು ಹೇಳಿದರು.

‘ಶಾಸಕರ ಸಿ ಪ್ರದೇಶಾಭಿವೃದ್ಧಿ ನಿಧಿಯಡಿ 6 ತಿಂಗಳ ಹಿಂದೆಯೇ  ₹ 30 ಲಕ್ಷ ಕೊಟ್ಟಿದ್ದೇನೆ. ವಿಧಾನ ಪರಿಷತ್‌ ಸದಸ್ಯರಾದ ನಜೀರ್ ಅಹಮ್ಮದ್‌ ಮತ್ತು ಮನೋಹರ್‌ ಅವರೂ ತಲಾ ₹ 10 ಲಕ್ಷ ನಿಧಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ₹ 50 ಲಕ್ಷ ನಿಧಿ ಸಿದ್ಧವಿದ್ದು, ಆ ಹಣ ಸದ್ಭಳಕೆ ಮಾಡಿಕೊಂಡು ಆಸ್ಪತ್ರೆ ನಿರ್ಮಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಆರೋಗ್ಯ ಇಲಾಖೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಸ್‌ಎನ್‌ಆರ್‌ ಆಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆ ನೌಕರರ ಪ್ರಾಣ ಸಹ ಮುಖ್ಯವಾಗಿದ್ದು, ಅವರಿಗೆ ಅಗತ್ಯ ಸೌಕರ್ಯ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ’ ಎಂದು ವಿವರಿಸಿದರು.

ಸ್ಯಾನಿಟೋರಿಯಂ ಜಾಗ

‘ಜಿಲ್ಲಾ ಕೇಂದ್ರದ ಹೊರವಲಯದ ಸ್ಯಾನಿಟೋರಿಯಂ ಜಾಗವು ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಾಗಿದೆ. ಪ್ರಸ್ತುತ ಆರೋಗ್ಯ ಇಲಾಖೆ ಕಚೇರಿಯಿರುವ ಈ 30 ಎಕರೆ ಜಮೀನು ಅರಣ್ಯ ಇಲಾಖೆಗೆ ಸೇರಿದೆ. ಆ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.