ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಪರಿಹಾರ ಧನಕ್ಕೆ ಅಡುಗೆ ಕೆಲಸಗಾರರ ಒತ್ತಾಯ

Last Updated 20 ಆಗಸ್ಟ್ 2020, 15:41 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಅಡುಗೆ ಕಾರ್ಮಿಕರಿಗೆ ಪರಿಹಾರಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿ ಬುಧವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

ಕಚೇರಿ ಎದುರು ಶಂಖನಾದದೊಂದಿಗೆ ತಮಟೆ ಬಾರಿಸಿ ಗಂಜಿ ಕುಡಿಯುವ ಮೂಲಕ ವಿನೂತನ ರೀತಿಯಲ್ಲಿ ಧರಣಿ ನಡೆಸಿದ ಸಂಘದ ಸದಸ್ಯರು, ‘ಸರ್ಕಾರ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಡುಗೆ ಕಾರ್ಮಿಕರಿಗೆ ₹ 5 ಸಾವಿರ ಪರಿಹಾರಧನ ಘೋಷಿಸಿತ್ತು. ಈವರೆಗೂ ಪರಿಹಾರಧನ ಕೊಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಶುಭ ಸಮಾರಂಭಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದೆಡೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರಬಾರದೆಂಬ ನಿಯಮ ಇರುವುದರಿಂದ ಅಡುಗೆ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಸಂಪಾದನೆ ಇಲ್ಲದೆ ಕಾರ್ಮಿಕರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ’ ಎಂದು ಸಂಘಟದ ರಾಜ್ಯ ಘಟಕದ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌ ಹೇಳಿದರು.

‘ಅಡುಗೆ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬಡ್ಡಿ ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ದುಡಿಮೆ ಇಲ್ಲದೆ ಅಡುಗೆ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಪರಿಹಾರಧನ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವ ಸರ್ಕಾರಕ್ಕೆ ಕಾರ್ಮಿಕರ ಸಂಕಷ್ಟದ ಅರಿವಿಲ್ಲ’ ಎಂದು ದೂರಿದರು.

ಗುರುತಿನ ಚೀಟಿ ವಿಳಂಬ: ‘ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಈಗಾಗಲೇ ಗುರುತಿನ ಚೀಟಿ ವಿತರಿಸಲಾಗಿದೆ. ಆದರೆ, ಅಡುಗೆ ಕೆಲಸಗಾರರು ಹಾಗೂ ಸಹಾಯಕ ಕಾರ್ಮಿಕರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯು ಗುರುತಿನ ಚೀಟಿ ನೀಡಲು ವಿಳಂಬ ಮಾಡುತ್ತಿದೆ. ಇದರಿಂದ ಕಾರ್ಮಿಕರು ಸರ್ಕಾರದ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ವಿ.ನಾಗರಾಜ್‌ ಅಳಲು ತೋಡಿಕೊಂಡರು.

ಹೋರಾಟದ ಎಚ್ಚರಿಕೆ: ‘ಶೀಘ್ರವೇ ಪರಿಹಾರಧನ ಬಿಡುಗಡೆ ಮಾಡಬೇಕು. ಗುರುತಿನ ಚೀಟಿ ವಿತರಿಸಬೇಕು. ಜತೆಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಎದುರು ಸೆ.17ರಂದು ಕುಟುಂಬ ಸದಸ್ಯರ ಸಮೇತ ಹೋರಾಟ ನಡೆಸುತ್ತೇವೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್‌ಬಾಬು, ಸದಸ್ಯರಾದ ಡಿ.ಎಂ.ಚನ್ನಯ್ಯ, ಎಂ.ಎಸ್.ಪರಮೇಶ್, ಎಸ್.ಶ್ರೀನಿವಾಸಗೌಡ, ಎಂ.ವೆಂಕಟಾಚಲಪತಿ, ಟಿ.ಎಸ್.ಶಾಮ್‌ಕುಮಾರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT