ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಸಿದ್ಧತೆ: ಸ್ವಚ್ಛತೆಗೆ ಒತ್ತು ನೀಡಿ

ಬಿಸಿಯೂಟ ಯೋಜನೆ ಸಿಬ್ಬಂದಿಗೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಕಿವಿಮಾತು
Last Updated 4 ಆಗಸ್ಟ್ 2021, 14:59 IST
ಅಕ್ಷರ ಗಾತ್ರ

ಕೋಲಾರ: ‘ಅನ್ನಪೂರ್ಣೆಯರಾಗಿರುವ ಬಿಸಿಯೂಟ ಯೋಜನೆ ಅಡುಗೆ ಸಿಬ್ಬಂದಿಯು ಊಟ ಸಿದ್ಧಪಡಿಸುವ ಹಂತದಲ್ಲಿ ಮತ್ತು ಮಕ್ಕಳಿಗೆ ಊಟ ಬಡಿಸುವಾಗ ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಕಿವಿಮಾತು ಹೇಳಿದರು.

ತಾಲ್ಲೂಕಿನ ಬಿಸಿಯೂಟ ಯೋಜನೆ ಸಿಬ್ಬಂದಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಕೋವಿಡ್‌ ಆತಂಕದ ಕಾರಣಕ್ಕೆ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಬಂದು ಶಾಲೆಗಳಲ್ಲಿ ಭೌತಿಕ ತರಗತಿ ಆರಂಭವಾದರೆ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತದೆ’ ಎಂದರು.

‘ಬಿಸಿಯೂಟ ನೌಕರರು ಅಡುಗೆ ಮಾಡುವುದರ ಜತೆಗೆ ಅಡುಗೆ ಕೋಣೆಯನ್ನು ಹೆಚ್ಚು ಸುರಕ್ಷಿತವಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಪಾತ್ರೆಗಳನ್ನು ತೊಳೆದು ಒಣಗಿಸಿಡಬೇಕು. ಮಕ್ಕಳು ಅಡುಗೆ ಕೊಠಡಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಅಡುಗೆ ಅನಿಲದ ಸಿಲಿಂಡರ್‌ ಅನ್ನು ಜಾಗೂರಕತೆಯಿಂದ ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಬಿಸಿಯೂಟ ಯೋಜನೆ ಸಿಬ್ಬಂದಿಗೆ ನೀಡುತ್ತಿರುವ ಸಂಭಾವನೆ ಸಾಲದು. ಆದರೂ ಅವರು ಮಕ್ಕಳಿಗೆ ಅನ್ನಪೂರ್ಣೆಯರಂತೆ ಊಟ ಮಾಡಿ ಬಡಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗಬೇಕು’ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಆಶಿಸಿದರು.

ಹೆಚ್ಚಿನ ಜವಾಬ್ದಾರಿ: ‘ಬಿಸಿಯೂಟ ಯೋಜನೆ ನೌಕರರಿಗೆ ಹೆಚ್ಚಿನ ಜವಾಬ್ದಾರಿಯಿದೆ. ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಅಪೌಷ್ಟಿತೆ ನಿವಾರಿಸುವ ಹೊಣೆ ಹೊಂದಿದ್ದೀರಿ. ಇಲಾಖೆ ಸೂಚಿಸಿರುವಂತೆ ಮಕ್ಕಳಿಗೆ ಆಯಾ ದಿನದ ಪಟ್ಟಿಯಂತೆ ಅಡುಗೆ ಸಿದ್ಧ ಮಾಡಿ. ಹೆಚ್ಚು ಸೊಪ್ಪು, ತರಕಾರಿ ಬಳಸಿ. ಮಕ್ಕಳನ್ನು ನಿಮ್ಮ ಮಕ್ಕಳೆಂದು ಭಾವಿಸಿ ಊಟ ಉಣಬಡಿಸಿ’ ಎಂದು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಎ.ಬಿ.ರಾಮಕೃಷ್ಣಪ್ಪ ಸೂಚಿಸಿದರು.

‘ಅಗ್ನಿ ಅನಾಹುತದ ಸಾಧ್ಯತೆ ಇರುವುದರಿಂದ ಅಡುಗೆ ಅನಿಲ ಬಳಸುವಾಗ ಎಚ್ಚರ ವಹಿಸಿ. ಅಡುಗೆ ಅನಿಲ ಸೋರಿಕೆ ತಡೆಗಟ್ಟಿ. ಅಡುಗೆ ಸಿದ್ಧತಾ ಕಾರ್ಯ ಆರಂಭಿಸುವ ಮುನ್ನ ಕೊಠಡಿಯ ಕಿಟಕಿ ಬಾಗಿಲು ತೆರೆಯಿರಿ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಿ’ ಎಂದರು.

‘ಬಿಸಿಯೂಟ ಯೋಜನೆ ಸಿಬ್ಬಂದಿಯ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಈ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮರ್ಪಕ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿ’ ಎಂದು ಭರವಸೆ ನೀಡಿದರು.

ಪ್ರಾತ್ಯಕ್ಷಿಕೆ: ಬೆಂಕಿ ನಂದಕ ಸಲಕರಣೆಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ರಾಘವೇಂದ್ರ, ‘ಬೆಂಕಿ ಅನಾಹುತ ತಡೆಗಟ್ಟಿ. ಅಡುಗೆ ಅನಿಲದ ಒಲೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ದುರಸ್ತಿ ಮಾಡಿಸಿ. ಸುರಕ್ಷತೆಗೆ ಹೆಚ್ಚು ಒತ್ತು ಕೊಡಿ’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡ ತಾಲ್ಲೂಕಿನ 700ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಅಡುಗೆ ಸಿದ್ಧಪಡಿಸುವ ಬಗ್ಗೆ ಮಾಹಿತಿ ನೀಡಿದರು. ಇಸಿಒ ರಾಘವೇಂದ್ರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲಕೃಷ್ಣ, ಪ್ರವೀಣ್, ಸಿ.ಎಸ್.ನಾಗರಾಜ್, ಟಿ.ಎಂ.ನಾಗರಾಜ್, ಸವಿತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT