ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್| ಬಡಜನರಿಗೆ ಆಹಾರ ಒದಗಿಸಲು ಜಮೀನು ಮಾರಿದ ಕೋಲಾರದ ಪಾಷಾ ಸಹೋದರರು

Last Updated 22 ಏಪ್ರಿಲ್ 2020, 8:21 IST
ಅಕ್ಷರ ಗಾತ್ರ

ಕೋಲಾರ: ಮಾರ್ಚ್ 25ರಿಂದ ದೇಶವ್ಯಾಪಿ ಲಾಕ್‍ಡೌನ್ ಘೋಷಣೆಯಾದಾಗ ಕೋಲಾರ ಜಿಲ್ಲೆಯ ತಾಜಮುಲ್ ಮತ್ತು ಮುಜಾಮಿಲ್ ಪಾಷಾ ಮಹತ್ತರವಾದ ತೀರ್ಮಾನವೊಂದನ್ನು ಕೈಗೊಂಡರು. ಅದೇನೆಂದರೆ ನಗರದಲ್ಲಿ ತಮ್ಮ ಹೆಸರಲ್ಲಿದ್ದ 30*40 ಜಮೀನನ್ನು ಮಾರುವುದು. ಈಸಹೋದರರು ಜಮೀನು ಮಾರಿದ್ದು ತಮ್ಮ ಕುಟುಂಬದ ಖರ್ಚಿಗಾಗಿ ಆಗಿರಲಿಲ್ಲ. ಅದು ಲಾಕ್‍ಡೌನ್‌ನಿಂದಾಗಿ ದೈನಂದಿನ ಜೀವನ ಸಾಗಿಸಲು ಕಷ್ಟಪಡುತ್ತಿದ್ದ ಜನರ ಖರ್ಚಿಗಾಗಿ ಆಗಿತ್ತು.

ಕೋಲಾರದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾಸಿಸುತ್ತಿರುವ ಈ ಸಹೋದರು ಜಮೀನು ಮಾರಿ ₹25 ಲಕ್ಷ ಸಂಪಾದಿಸಿದ್ದಾರೆ. ಈ ಹಣವನ್ನು ಬಡಜನರಿಗೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ವಿನಿಯೋಗಿಸಿದ್ದಾರೆ.

ಕೋವಿಡ್-19 ವಿರುದ್ಧ ಹೋರಾಡಬೇಕಾದರೆ ಐಸೋಲೇಷನ್‌ನಲ್ಲಿರಬೇಕು. ಬಡ ಜನರು ಆಹಾರಕ್ಕಾಗಿ ಹೊರಗೆ ಹೋಗುವಂತಿಲ್ಲ. ಹೀಗಿರುವಾಗ ಅವರ ಮನೆಬಾಗಿಲಿಗೆ ವಸ್ತುಗಳನ್ನು ತಲುಪಿಸಿ ಅವರು ಮನೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು 'ಡೆಕ್ಕನ್ ಹೆರಾಲ್ಡ್' ಜತೆ ಮಾತನಾಡಿದ ತಾಜಮುಲ್ ಪಾಷಾ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೊಹಮ್ಮದ್‌ಪುರ್ ಗ್ರಾಮದವರಾಗಿದ್ದಾರೆ ಪಾಷಾ. ತಾಜಮುಲ್‌- 8 ಮತ್ತು ಮುಜಾಮಿಲ್‌ 5 ವರ್ಷದವನಿದ್ದಾಗ ಅಪ್ಪ ಅಮ್ಮ ತೀರಿ ಹೋಗಿದ್ದರು.ಇದಾದನಂತರ ಇವರು ಅಜ್ಜಿ ಜತೆ ಕೋಲಾರಕ್ಕೆ ಬಂದು ನೆಲೆಸಿದ್ದರು.

ದೈನಂದಿನ ಬದುಕು ಸಾಗಿಸುವುದಕ್ಕಾಗಿ ದುಡಿಯಲೇ ಬೇಕಾದ ಪರಿಸ್ಥಿತಿ ಬಂದಾಗ ಇವರು ನಾಲ್ಕನೇ ತರಗತಿಗೆ ಶಿಕ್ಷಣ ಕೈ ಬಿಡಬೇಕಾಗಿ ಬಂತು.

ಉದಾರಿ ವ್ಯಕ್ತಿಯೊಬ್ಬರು ನಮಗೆ ಗೌರಿಪೇಟೆಯ ಮಸೀದಿ ಬಳಿ ಮನೆಯೊಂದನ್ನು ನೀಡಿದ್ದರು. ಹಿಂದೂ,ಮುಸ್ಲಿಂ, ಸಿಖ್ ಸೇರಿದಂತೆ ಹಲವಾರು ಕುಟುಂಬದವರು ನಮಗೆ ಆ ದಿನ ಅನ್ನ ನೀಡಿ ಸಹಾಯಮಾಡಿದ್ದಾರೆ. ಜಾತಿ ಮತ್ತು ಧರ್ಮಗಳು ಯಾವತ್ತೂ ಗೋಡೆಗಳಾಗಿಲ್ಲ. ನಮ್ಮನ್ನು ಒಂದಾಗಿಸಿದ್ದೇ ಮಾನವೀಯತೆ. ಅದನ್ನೇ ನಾವೀಗ ಮಾಡುತ್ತಿದ್ದೇವೆ.ಆ ದಿನಗಳು ನಮಗೆ ಅನ್ನದ ಬೆಲೆ ಏನು ಎಂಬುದನ್ನು ತಿಳಿಸಿತ್ತು. ನಮ್ಮ ಬಾಲ್ಯದ ಅನುಭವಗಳು ಲಾಕ್‌ಡೌನ್ ದಿನಗಳಲ್ಲಿ ಬಡವರಿಗೆ ಸಹಾಯ ಮಾಡುವಂತೆ ಪ್ರೇರೇಪಿಸಿತು ಅಂತಾರೆ ತಾಜಮುಲ್.

ಕಮ್ಯೂನಿಟಿ ಕಿಚನ್ ಮೂಲಕ ಆಹಾರ ಪೂರೈಕೆ
₹25 ಲಕ್ಷ ಸಂಪಾದಿಸಿದ ನಂತರ ಈ ಸಹೋದರರು ಎಲ್ಲ ಸಮುದಾಯದವರನ್ನು ಸೇರಿಸಿ ತಂಡವೊಂದನ್ನು ರೂಪಿಸಿದರು. ಜನರಿಗೆ ಸಹಾಯ ಮಾಡುವುದಕ್ಕಾಗಿ ರಚಿಸಿದ ತಂಡವಾಗಿತ್ತು ಅದು. ಮೊದಲು ಆಹಾರ ಸಾಮಾಗ್ರಿಗಳನ್ನು ಖರೀದಿಸಿ ತಮ್ಮ ಮನೆಯಲ್ಲಿ ಸಂಗ್ರಹಿಸಿದರು. ಆಹಾರವಸ್ತುಗಳ ಒಂದು ಪೊಟ್ಟಣ ಸಿದ್ಧಪಡಿಸಿದರು.ಅದರಲ್ಲಿ 10ಕೆಜಿ ಅಕ್ಕಿ, 1ಕೆಜಿ ಮೈದಾ, 2 ಕೆಜಿ ಗೋಧಿ, 1 ಕೆಜಿ ಸಕ್ಕರೆ, ಅಡುಗೆ ಎಣ್ಣೆ, ಚಹಾ ಪುಡಿ, ಮಸಾಲೆ ಪುಡಿ, ಸ್ಯಾನಿಟೈಜರ್ ಮತ್ತು ಮಾಸ್ಕ್ ಇದೆ.ಇದಾದನಂತರ ಅವರ ಮನೆಯ ಹತ್ತಿರವೇ ಟೆಂಟ್ ನಿರ್ಮಿಸಿ ಕಮ್ಯೂನಿಟಿ ಕಿಚನ್‌ನಲ್ಲಿ ಆಹಾರ ತಯಾರಿಸಿ ಅಲ್ಲಿನ ಕುಟುಂಬಗಳಿಗೆ ವಿತರಣೆ ಮಾಡಿದರು.

ಈ ತಂಡದ ಕಾರ್ಯಕರ್ತರು ಓಡಾಟಕ್ಕಾಗಿ ಪೋಲಿಸರಿಂದ ಪಾಸ್ ಪಡೆದುಕೊಂಡಿದ್ದಾರೆ.ಆಹಾರ ವಸ್ತುಗಳ ಅಗತ್ಯವಿದೆ ಎಂದು ಮಾಹಿತಿ ಸಿಕ್ಕಿದರೆ ಅವರು ಅಲ್ಲಿಗೆ ಹೋಗಿ ಮಾಹಿತಿ ಸಂಗ್ರಹಿಸಿ ಆ ಊರಿಗೆ ನಿಯೋಜಿತರಾಗಿರುವ ಪ್ರತಿನಿಧಿ ಮೂಲಕ ವಸ್ತುಗಳನ್ನು ತಲುಪಿಸುತ್ತಾರೆ.

ಪ್ರತಿಯೊಂದು ಕುಟುಂಬದ ಸದಸ್ಯರಿಗೂ ಮೂರು ಹೊತ್ತು ಊಟ ಸಿಗುತ್ತದೆ ಎಂದು ಇವರು ಖಾತರಿ ಪಡಿಸಿಕೊಳ್ಳುತ್ತಾರೆ.
ಇಲ್ಲಿಯವರೆಗ ಈ ಪಾಷಾ ಸಹೋದರರು 2,800ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ಆಹಾರ ವಸ್ತುಗಳನ್ನು ನೀಡಿದ್ದಾರೆ. ಅಂದರೆ ಸುಮಾರು 12,000 ಜನರಿಗೆ ಈ ವಸ್ತುಗಳು ತಲುಪಿವೆ. 2,000ಕ್ಕಿಂತಲೂ ಹೆಚ್ಚು ಮಂದಿಗೆ ಇವರು ಆಹಾರವನ್ನು ನೀಡಿದ್ದಾರೆ. ಇದೀಗ ಈ ಸಹೋದರರು ತಮ್ಮಂತೆಯೇ ಇರುವ ಇತರ ಜನರೊಂದಿಗೆ ಸೇರಿ ಸಹಾಯ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಸರ್ಕಾರ ಲಾಕ್‌ಡೌನ್ ವಿಸ್ತರಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ.ಆದರೆ ದೇವರು ನನಗೆ ಕೊಟ್ಟ ಸಂಪನ್ಮೂಲವನ್ನುಬಳಸಿ ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ.ಲಾಕ್‍ಡೌನ್ ಮುಗಿಯುವವರೆಗೆ ನಾನು ಈ ರೀತಿ ಸಹಾಯ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ತಾಜಮುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT