ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕೊರೊನಾ ಸೋಂಕಿಗೆ 2ನೇ ಬಲಿ

ಜಿಲ್ಲೆಯಲ್ಲಿ ಮತ್ತೆ 4 ಮಂದಿಗೆ ಸೋಂಕು: ಹೆಚ್ಚಿದ ಆತಂಕ
Last Updated 29 ಜೂನ್ 2020, 15:52 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 2ನೇ ಬಲಿಯಾಗಿದ್ದು, ಶ್ರೀನಿವಾಸಪುರ ತಾಲ್ಲೂಕಿನ ತಮ್ಮರೆಡ್ಡಿ ಗಾರಿಪಲ್ಲಿ ಗ್ರಾಮದ 44 ವರ್ಷದ ಸೋಂಕಿತ ವ್ಯಕ್ತಿ (ಸೋಂಕಿತರ ಸಂಖ್ಯೆ– 10,840) ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಮೂಲತಃ ತಮ್ಮರೆಡ್ಡಿ ಗಾರಿಪಲ್ಲಿ ಗ್ರಾಮದ ಇವರು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನ ಹುಚ್ಚೇಗೌಡನ ಪಾಳ್ಯದಲ್ಲಿ ವಾಸವಾಗಿದ್ದ ಇವರು ಕುಟುಂಬ ಸದಸ್ಯರೊಂದಿಗೆ ಇತ್ತೀಚೆಗೆ ಹುಟ್ಟೂರಿಗೆ ವಾಪಸ್‌ ಬಂದಿದ್ದರು.

ನಂತರ ಇವರ ಪತ್ನಿಯು ಅನಾರೋಗ್ಯದ ಕಾರಣಕ್ಕೆ ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದರು. ವೈದ್ಯಕೀಯ ಸಿಬ್ಬಂದಿಯು ಅವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಜೂನ್‌ 24ರಂದು ಬಂದ ಪ್ರಯೋಗಾಲಯದ ವರದಿಯಲ್ಲಿ ಅವರಿಗೆ ಸೋಂಕು ಇರುವುದು ಗೊತ್ತಾಗಿತ್ತು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಪತಿಗೂ ಸೋಂಕು ಹರಡಿತ್ತು.

ಸೋಂಕಿತ ಪತಿಯನ್ನು ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಹಾಗೂ ಪತ್ನಿಯನ್ನು ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಸೋಂಕಿತ ಪತಿಯ ದೇಹಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿತ್ತು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಂತಿಮವಾಗಿ ಶುಕ್ರವಾರ ಕೊನೆಯುಸಿರೆಳೆದರು.

4 ಹೊಸ ಪ್ರಕರಣ: ಕೊರೊನಾ ಸೋಂಕಿತ ವ್ಯಕ್ತಿಯ ಸಾವಿನ ಬೆನ್ನಲ್ಲೇ ಜಿಲ್ಲೆಯಲ್ಲಿ ಸೋಮವಾರ ಸಂಜೆ ಕೊರೊನಾ ಸೋಂಕಿನ 4 ಹೊಸ ಪ್ರಕರಣಗಳು ವರದಿಯಾಗಿವೆ. ಕೆಜಿಎಫ್‌ನ ಬೆಮಲ್‌ ಉದ್ಯೋಗಿಗೆ ಸೋಂಕು ಇರುವುದು ದೃಢಪಟ್ಟಿದೆ. ಮೂಲತಃ ಬೆಂಗಳೂರಿನ ಈ ಸೋಂಕಿತ ವ್ಯಕ್ತಿಯು ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಾರಾಂತ್ಯದಲ್ಲಿ ಇವರು ಬೆಂಗಳೂರಿಗೆ ಹೋಗಿ ಬರುತ್ತಿದ್ದರು.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಜೂನ್ 20ರಿಂದ ಕೆಲಸಕ್ಕೆ ಬಂದಿರಲಿಲ್ಲ. ಚಿಕಿತ್ಸೆಗಾಗಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಹೋಗಿದ್ದ ಇವರಿಗೆ ಕೋವಿಡ್–19 ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಸಲಹೆಯಂತೆ ಇವರು ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಜೂನ್‌ 27ರಂದು ಕೋವಿಡ್‌ ಪರೀಕ್ಷೆ ಮಾಡಿಸಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಪ್ರಯೋಗಾಲಯದ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ.

ಬಂಗಾರಪೇಟೆ ಪಟ್ಟಣದ ಜೈನ್‌ ದೇವಸ್ಥಾನದ ಬಳಿ ವಾಸವಿರುವ ವ್ಯಕ್ತಿಯೊಬ್ಬರಿಗೆ ಸೋಂಕು ಹರಡಿದೆ. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಶವದಲ್ಲಿ ಪತ್ತೆ: ಕೋಲಾರದ ದರ್ಗಾ ಮೊಹಲ್ಲಾ ಬಡಾವಣೆಯ 62 ವರ್ಷದ ವಯೋವೃದ್ಧರೊಬ್ಬರು ಜಾಲಪ್ಪ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದರು. ನಂತರ ಆಸ್ಪತ್ರೆ ಸಿಬ್ಬಂದಿಯು ಶವದಿಂದ ಕಫಾ ಮಾದರಿ ಸಂಗ್ರಹಿಸಿ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದರು,
ಬಳಿಕ ಕುಟುಂಬ ಸದಸ್ಯರು ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಅಂತಿಮ ವಿಧಿವಿಧಾನ ಪೂರ್ಣಗೊಳಿಸಿ ಮಣ್ಣಿನಲ್ಲಿ ಹೂತು ಅಂತ್ಯಕ್ರಿಯೆ ನಡೆಸಿದ್ದರು. ಮೃತ ವ್ಯಕ್ತಿಯ ವೈದ್ಯಕೀಯ ವರದಿ ರಾತ್ರಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿದ ಸಂಗತಿ ಗೊತ್ತಾಗಿದೆ.

ಇದೀಗ ಸೋಂಕಿತ ವ್ಯಕ್ತಿಯ ಶವದ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಕುಟುಂಬ ಸದಸ್ಯರು ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗಿಯಾದ 10ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯು ಇವರೆಲ್ಲರನ್ನೂ ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಿದ್ದಾರೆ.

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಹರಡಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಪ್ರತಿನಿತ್ಯ ಅಲ್ಲಿಂದಲೇ ಕೆಲಸಕ್ಕೆ ಬರುತ್ತಿದ್ದರು. ಹೀಗಾಗಿ ಇವರಿಗೆ ಬೆಂಗಳೂರಿನಲ್ಲಿ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT