ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕ್ಷಣಗಣನೆ

ಬೃಹತ್‌ ವೇದಿಕೆ ನಿರ್ಮಾಣ: ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
Last Updated 4 ಫೆಬ್ರುವರಿ 2020, 14:35 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಕಾರ್ಯಕ್ರಮ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಕಾರ್ಯಕ್ರಮದ ಸ್ಥಳದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಮಕ್ಕಳು ಸ್ಪರ್ಧೆಗೆ ಮಂಗಳವಾರದಿಂದಲೇ ಹೆಸರು ನೋಂದಣಿ ಮಾಡಲಾರಂಭಿಸಿದ್ದು, ಅವರಿಗೆ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿದೆ.

ಕಾರ್ಯಕ್ರಮ ನಡೆಯಲಿರುವ ನಗರದ ಜೂನಿಯರ್ ಕಾಲೇಜು ಸುಂದರ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ 3 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಪೆಂಡಾಲ್ ಹಾಗೂ ವೇದಿಕೆಯಲ್ಲಿ ಡಿಜಿಟಲ್ ಫಲಕ ಅಳವಡಿಸಲಾಗಿದೆ.

ಗಣ್ಯ ವ್ಯಕ್ತಿಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಮಾಧ್ಯಮದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸಭಾಂಗಣದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರ ಭಾವಚಿತ್ರವಿರುವ ನಾಮಫಲಕ ಹಾಕಲಾಗಿದೆ.

ಮಕ್ಕಳ ಆಗಮನ: ವಿವಿಧ ಜಿಲ್ಲೆಗಳಿಂದ ಮಂಗಳವಾರ ನಗರಕ್ಕೆ ಬಂದ ಮಕ್ಕಳನ್ನು ಆಯಾ ಜಿಲ್ಲೆಗಳ ಸಂಪರ್ಕಾಧಿಕಾರಿಗಳು ಸ್ವಾಗತಿಸಿದರು. ಮಕ್ಕಳಿಗೆ ಕುಡಿಯುವ ನೀರು, ಟೊಮೆಟೊ ಬಾತ್‌, ಮೊಸರು ಬಜ್ಜಿ ನೀಡಿ ನೋಂದಣಿ ಮಾಡಿಸಿದರು. ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ, ಕಲಬುರ್ಗಿ ಸೇರಿದಂತೆ ದೂರದ ಜಿಲ್ಲೆಗಳ ಮಕ್ಕಳು ನೋಡಲ್ ಅಧಿಕಾರಿಗಳೊಂದಿಗೆ ಆಗಮಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ನೇತೃತ್ವದ ವೈದ್ಯರ ತಂಡವು ಮಕ್ಕಳ ಆರೋಗ್ಯ ತಪಾಸಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆರೋಗ್ಯ ತಪಾಸಣೆಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಮೈದಾನದಲ್ಲಿ ‘ಮಗು–-ನಗು’ ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.

ಅಡುಗೆ ಸಿದ್ಧತೆ: 100ಕ್ಕೂ ಹೆಚ್ಚು ಮಂದಿ ಅಡುಗೆ ಕೆಲಸಗಾರರು ಹಾಲಿಸ್ಟರ್ ಸ್ಮಾರಕಭವನದಲ್ಲಿ ಅಡುಗೆಗೆ ಸಿದ್ಧತೆ ಆರಂಭಿಸಿದ್ದಾರೆ. ಬುಧವಾರದ ಅಡುಗೆಗೆ ತರಕಾರಿ ಕತ್ತರಿಸುವ ಕಾರ್ಯ ಆರಂಭವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಅಡುಗೆ ವ್ಯವಸ್ಥೆ ಪರಿಶೀಲಿಸಿದರು.

ಮಕ್ಕಳನ್ನು ವಾಸ್ತವ್ಯದ ಸ್ಥಳದಿಂದ ಸ್ಪರ್ಧೆಯ ಸ್ಥಳಕ್ಕೆ ಕರೆತರಲು ಶಾಲಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಮುಗಿದ ನಂತರ ಮಕ್ಕಳ ವಾಸ್ತವ್ಯಕ್ಕೆ ನಿಗದಿಯಾಗಿರುವ ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳಿಗೆ ಶಾಲಾ ವಾಹನದಲ್ಲೇ ಕರೆದೊಯ್ಯಲಾಗುತ್ತದೆ.ವೇದಿಕೆ ಬಳಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ತಲಾ 10 ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ಜತೆಗೆ ಬಾಲಕರ ಹಾಗೂ ಬಾಲಕಿಯರ ಜೂನಿಯರ್ ಕಾಲೇಜು ಆವರಣದಲ್ಲಿರುವ ಶೌಚಾಲಯಗಳ ಬಳಕೆಗೆ ನೀರು ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT