ಭಾನುವಾರ, ಜೂನ್ 13, 2021
22 °C
ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕೆ

ಕೋವಿಡ್‌ ನಿಯಂತ್ರಣ: ಸರ್ಕಾರ ವಿಫಲ, ರಾಮಲಿಂಗಾರೆಡ್ಡಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌ ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸೇವೆಗಾಗಿ ಕಾಂಗ್ರೆಸ್‌ ಜಿಲ್ಲಾ ಘಟಕವು ಆರಂಭಿಸಿರುವ ಆಂಬುಲೆನ್ಸ್‌ ಸೇವೆಗೆ ಇಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಜ್ಞರ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಲಿಖಿತ ರೂಪದಲ್ಲೇ ಸಲಹೆ ನೀಡಿತ್ತು. ಆದರೆ, ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಕೋವಿಡ್‌ 2ನೇ ಅಲೆ ತೀವ್ರವಾಗಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ತಿಂಗಳ ಹಿಂದೆಯೇ ಕೋವಿಡ್‌ ಎರಡನೇ ಅಲೆ ಆರಂಭವಾಗಿತ್ತು. ಅದನ್ನು ನೋಡಿಯಾದರೂ ರಾಜ್ಯ ಸರ್ಕಾರ ಪಾಠ ಕಲಿಯಬೇಕಿತ್ತು. ಆದರೆ, ಸರ್ಕಾರ ಸಕಾಲಕ್ಕೆ ಎಚ್ಚೆತ್ತುಕೊಳ್ಳದ ಕಾರಣಕ್ಕೆ ಈಗ ಅನಾಹುತ ಸಂಭವಿಸುತ್ತಿದೆ’ ಎಂದು ಕಿಡಿಕಾರಿದರು.

‘ತಮಿಳುನಾಡು ಸರ್ಕಾರ ಲಾಕ್‌ಡೌನ್‌ ಘೋಷಿಸಿ ಬಡತನ ರೇಖೆಗಿಂತ ಕೆಳಗಿನ ಪ್ರತಿ ಕುಟುಂಬಕ್ಕೆ ₹ 4 ಸಾವಿರ ಆರ್ಥಿಕ ನೆರವು ನೀಡಲು ಮುಂದಾಗಿದೆ. ಕೇರಳ ₹ 5 ಸಾವಿರ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ನೀಡಿದೆ. ಆಂಧ್ರಪ್ರದೇಶ ಕೊರೊನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಕಲ್ಪಿಸಿದೆ. ಆದರೆ, ರಾಜ್ಯದಲ್ಲಿ ಲಾಕ್‌ಡೌನ್‌ ವೇಳೆ ಜನ ಮನೆಯಿಂದ ಆಚೆ ಬರಬಾರದೆಂದು ಆದೇಶಿಸಲಾಗಿದೆ. ಸರ್ಕಾರ ಯಾವುದೇ ನೆರವು ನೀಡದೆ ಜನ ಜೀವನ ಸಾಗಿಸುವುದು ಹೇಗೆ?’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ನೇರವಾಗಿ ಕಂಪನಿಗಳಿಂದ ರೆಮ್‌ಡಿಸಿವರ್‌ ಚುಚ್ಚುಮದ್ದು ಖರೀದಿಸುತ್ತಿದೆ. ಇದರಲ್ಲಿ ಮದ್ಯವರ್ತಿಗಳಿಲ್ಲ. ಆದರೂ ಸೋಂಕಿತರಿಗೆ ಯಾಕೆ ಚುಚ್ಚುಮದ್ದು ಸಿಗುತ್ತಿಲ್ಲ? ಕಾಳಸಂತೆಯಲ್ಲಿ ₹ 15 ಸಾವಿರದಿಂದ ₹ 30 ಸಾವಿರದವರೆಗೆ ಚುಚ್ಚುಮದ್ದು ಮಾರಾಟವಾಗುತ್ತಿದೆ. ಹಣ ಕೊಟ್ಟರೆ ಎಷ್ಟು ಬೇಕಾದರೂ ಚುಚ್ಚುಮದ್ದು ಸಿಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ’ ಎಂದು ಆರೋಪಿಸಿದರು.

ಬಿಜೆಪಿಗೆ ಛೀಮಾರಿ: ‘ಆರೋಗ್ಯ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೆ 4,500 ರೆಮ್‌ಡಿಸಿವರ್‌ ನೀಡಿ ಬೆಂಗಳೂರು ನಗರಕ್ಕೆ ಕೇವಲ 1,500 ಹಂಚಿಕೆ ಮಾಡಿದ್ದಾರೆ. ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಮಾತ್ರ ಆರೋಗ್ಯ ಸಚಿವರ ಅಥವಾ ಇಡೀ ರಾಜ್ಯಕ್ಕೆ ಆರೋಗ್ಯ ಸಚಿವರ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಲೇವಡಿ ಮಾಡಿದರು.

‘ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಯಾರಿಗೂ ಅಧಿಕಾರ ನಡೆಸುವ ಚಾಣಾಕ್ಷತನ ಮತ್ತು ಧೈರ್ಯವಿಲ್ಲ. ಅವರಿಗೆ ಅಧಿಕಾರ ಬೇಕಷ್ಟೇ. ಆದರೆ, ಆಡಳಿತ ನಡೆಸಲು ಬರುವುದಿಲ್ಲ. ಬಿಜೆಪಿಯವರಿಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವುದು ಮಾತ್ರ ಗೊತ್ತು. ದೇಶದೆಲ್ಲೆಡೆ ಜನ ಬಿಜೆಪಿಗೆ ಛೀಮಾರಿ ಹಾಕುತ್ತಿದ್ದಾರೆ’ ಎಂದು ಗುಡುಗಿದರು.

ಸ್ಪಷ್ಟತೆಯಿಲ್ಲ: ‘ಕೋವಿಡ್‌ ಲಸಿಕೆ ನೀಡಿಕ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ಮುಖ್ಯಮಂತ್ರಿಗಳು ಮತ್ತು ಸಚಿವರು ಬಿಟ್ಟಿ ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಚಿವರ ಹೇಳಿಕೆಯಲ್ಲಿ ಗಂಭೀರತೆಯಿಲ್ಲ. ಯಡಿಯೂರಪ್ಪ ಅವರ ಸಂಪುಟದ ಯಾವುದೇ ಸಚಿವರಿಗೆ ಕನಿಷ್ಠ ಜವಾಬ್ದಾರಿಯಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸಿ ಸೇವೆ ಮಾಡುವ ಮನೋಭಾವ ಯಾರಲ್ಲೂ ಇಲ್ಲ’ ಎಂದು ಕುಟುಕಿದರು.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು