ಕೋವಿಡ್ ಅಟ್ಟಹಾಸಕ್ಕೆ ದೇಶ ತತ್ತರ: ವೀರಣ್ಣಗೌಡ ಕಳವಳ

ಕೋಲಾರ: ‘ಇಡೀ ದೇಶ ಕೋವಿಡ್ ಅಟ್ಟಹಾಸಕ್ಕೆ ತತ್ತರಿಸಿ ಹೋಗಿದೆ. ಕೊರೊನಾ ಸೋಂಕಿನಿಂದ ಆತ್ಮೀಯರು, ಸಂಬಂಧಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರೆ. ಮತ್ತೊಂದೆಡೆ ಜನ ಆರ್ಥಿಕ ಸಮಸ್ಯೆಯಿಂದ ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ವೀರಣ್ಣಗೌಡ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ತಲಗುಂದ ಗ್ರಾಮದ ಬಳಿಯಿರುವ ನಿರಾಶ್ರಿತ ವಲಸಿಗರ ಕುಟುಂಬಕ್ಕೆ ಶಿಕ್ಷಕರ ಗೆಳೆಯರ ಬಳಗ ಮತ್ತು ಸ್ವರ್ಣಭೂಮಿ ಪ್ರತಿಷ್ಠಾನದ ವತಿಯಿಂದ ಬುಧವಾರ ದಿನಸಿ ವಿತರಿಸಿ ಮಾತನಾಡಿ, ‘ಶಿಕ್ಷಕರ ಗೆಳೆಯರ ಬಳಗವು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಈಗ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುತ್ತಿದೆ’ ಎಂದರು.
‘ಕೋವಿಡ್ ಮತ್ತು ಲಾಕ್ಡೌನ್ನಿಂದ ದೇಶದ ಅರ್ಥ ವ್ಯವಸ್ಥೆಯೇ ಬುಡಮೇಲಾಗಿದೆ. ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜನರಿಗೆ ಕೆಲಸವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ದುಡಿಮೆ ಇಲ್ಲದ ಕಾರಣ ಬಡ ಜನರ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಆರ್ಥಿಕ ಸ್ಥಿತಿವಂತರು ಬಡವರ ನೆರವಿಗೆ ಧಾವಿಸಬೇಕು’ ಎಂದು ಮನವಿ ಮಾಡಿದರು.
ಸ್ವರ್ಣಭೂಮಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಶಿವಕುಮಾರ್, ಸದಸ್ಯ ವಿನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸೂಪರಿಂಟೆಂಡೆಂಟ್ ಗಿರೀಶ್ಕುಮಾರ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.