ಬುಧವಾರ, ಜೂನ್ 16, 2021
27 °C

ಕೋವಿಡ್: ಪ್ರೊಬೇಷನರಿ ಪಿಎಸ್ಐ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕು ತಗುಲಿ ಇಲ್ಲಿನ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಪ್ರೊಬೇಷನರಿ ಹಂತದ ಪಿಎಸ್‌ಐ ಶಾಮಿಲಿ (24) ಅವರು ಮಂಗಳವಾರ ಮೃತಪಟ್ಟಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ್ದ ಅವರು ಜ.11ರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದ ಲಕ್ಷ್ಮಯ್ಯ ಅವರ ಮಗಳಾದ ಶಾಮಿಲಿ ಮಂಗಳೂರಿನಲ್ಲಿ ಎಂ.ಎಸ್ಸಿ ಓದಿದ್ದರು. 8 ತಿಂಗಳ ಹಿಂದೆ ಅವರು ಸನತ್‌ಕುಮಾರ್‌ ಎಂಬುವರನ್ನು ಮದುವೆಯಾಗಿದ್ದರು. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೀರಗಾನಹಳ್ಳಿಯ ಸನತ್‌ಕುಮಾರ್‌ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ.

7 ತಿಂಗಳ ಗರ್ಭಿಣಿಯಾಗಿದ್ದ ಶಾಮಿಲಿ, ರಜೆ ಪಡೆದು ಏ.29ರಂದು ಬೀರಗಾನಹಳ್ಳಿಯಲ್ಲಿನ ಪತಿಯ ಮನೆಗೆ ಬಂದಿದ್ದರು. ನಂತರ ಅವರಿಗೆ ಜ್ವರ ಬಂದಿತ್ತು. ಹೀಗಾಗಿ ಮೇ 2ರಂದು ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಬೀರಗಾನಹಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಕೋವಿಡ್‌ ಮಾರ್ಗಸೂಚಿಯಂತೆ ಮೃತರ ಅಂತ್ಯಕ್ರಿಯೆ ನಡೆಸಲಾಯಿತು.

ಲಕ್ಷ್ಮಯ್ಯ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳು.

ಡಿಜಿಪಿ ಸಂತಾಪ: ಶಾಮಿಲಿ ಅವರ ಸಾವಿಗೆ ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್, ‘ಪೊಲೀಸ್ ಕುಟುಂಬದ ಕಿರಿಯ ಸದಸ್ಯೆ ಶಾಮಿಲಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಜನರು ಕೋವಿಡ್ ನಿಯಮ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಿ, ಮನೆಯಲ್ಲೇ ಸುರಕ್ಷಿತವಾಗಿರಬೇಕು’ ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.