ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ಗೆ ಬಿಬಿಎಂಪಿ ತ್ಯಾಜ್ಯ: ಸಿಪಿಎಂ ಪ್ರತಿಭಟನೆ

Published : 6 ಸೆಪ್ಟೆಂಬರ್ 2024, 16:01 IST
Last Updated : 6 ಸೆಪ್ಟೆಂಬರ್ 2024, 16:01 IST
ಫಾಲೋ ಮಾಡಿ
Comments

ಕೆಜಿಎಫ್‌: ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ಬೆಂಗಳೂರಿನ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಣ ಯೋಜನೆ ವಿರುದ್ಧ ಸಿಪಿಎಂ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ, ಶಾಸಕಿ, ಸಂಸದ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸರ್ಕಾರವು ಕೂಡಲೇ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಬಡಮಾಕನಹಳ್ಳಿ ಮತ್ತು ಬೇತಮಂಗಲ ಮಧ್ಯದಲ್ಲಿರುವ 318 ಎಕರೆ ಜಾಗದಲ್ಲಿ ಬಿಬಿಎಂಪಿಗೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಪ್ರಸ್ತಾವ ಇಲ್ಲ ಎಂದು ಹೇಳುತ್ತಿದ್ದರೂ, ಜಿಲ್ಲಾಧಿಕಾರಿ ಇದುವರೆವಿಗೂ ಯೋಜನೆಯನ್ನು ಕೈಬಿಟ್ಟ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ ಎಂದು ಎಂದು ನಗರಸಭೆ ಸದಸ್ಯ ಪಿ.ತಂಗರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಕೂಡಂಕುಲಂ ಅಣು ತ್ಯಾಜ್ಯವನ್ನು ಗಣಿಯ ಸುರಂಗದೊಳಗೆ ಹಾಕಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಆಗ ಜನರ ಹೋರಾಟದ ಫಲವಾಗಿ ಯೋಜನೆ ಕೈಬಿಡಲಾಯಿತು. ಈಗ ಜನರ ವಿರೋಧದ ನಡುವೆಯೂ ಜಿಲ್ಲಾಡಳಿತ ಜಾಗವನ್ನು ನೀಡಲು ಮುಂದಾಗಿರುವುದು ಖಂಡನೀಯ ಎಂದರು.

ಬಿಜಿಎಂಎಲ್‌ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೇ ನೀಡಬೇಕು ಎಂದು ನ್ಯಾಯಾಲಯದ ತೀರ್ಪು ಬಂದಿತ್ತು. ಅದನ್ನು ಇದುವರೆವಿಗೂ ಜಾರಿಗೊಳಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಈಗ ತ್ಯಾಜ್ಯ ಘಟಕಕ್ಕೆ ನೂರಾರು ಎಕರೆ ಕೊಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಮಲ್‌ ಗುತ್ತಿಗೆಕಾರ್ಮಿಕರಿಗೆ ಅನ್ಯಾಯವಾಗುತ್ತಲೇ ಬಂದಿದೆ. ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಲಾಯಿತು. ಸಂಸದ, ಕೆಜಿಎಫ್ ಮತ್ತು ಬಂಗಾರಪೇಟೆ ಶಾಸಕರು ಜಂಟಿಯಾಗಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ಕೊಟ್ಟ ಭರವಸೆ ಈಡೇರಿಲ್ಲ. ಬಿಜಿಎಂಎಲ್‌ ಪುನರಾರಂಭದ ಬಗ್ಗೆ ಕೂಡ ಭರವಸೆ ನೀಡುತ್ತಿದ್ದರೂ, ಅದು ಕೂಡ ಈಡೇರಿಲ್ಲ. ನಗರದಲ್ಲಿ ನೀರಿನ ಸಮಸ್ಯೆ ಅಗಾಧವಾಗಿದ್ದರೂ, ಕೇವಲ ಎಂಟು ಕಿ.ಮೀ ದೂರದಲ್ಲಿರುವ ಯರಗೋಳ್‌ ಯೋಜನೆಯ ನೀರನ್ನು ಕೆಜಿಎಫ್‌ಗೆ ತರಲು ಸಾಧ್ಯವಾಗಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಕೆಜಿಎಫ್‌ ನಗರದವೊಂದರಲ್ಲಿಯೇ ಪ್ರತಿದಿನ 65 ಟನ್‌ ಕಸ ಸಂಗ್ರಹವಾಗುತ್ತಿದೆ. ಅದನ್ನೇ ಸರಿಯಾಗಿ ನಿರ್ವಹಣೆ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಇನ್ನು ಬೆಂಗಳೂರಿನಲ್ಲಿ ಸಂಗ್ರಹವಾಗುವ ಸಾವಿರಾರು ಟನ್‌ ಕಸವನ್ನು ತಂದು ಇಲ್ಲಿ ಸುರಿದರೆ ಸ್ಥಳೀಯ ಜನರ ಪಾಡೇನು ಎಂದು ತಂಗರಾಜ್‌ ಕಿಡಿಕಾರಿದರು.

ನಗರವನ್ನು ವಿಷದ ನಗರವನ್ನಾಗಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ಸಿಪಿಎಂ ನಿರಂತರ ಹೋರಾಟ ನಡೆಸುತ್ತದೆ ಎಂದು ಮುಖಂಡರ ಆನಂದನ್‌ ಹೇಳಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ನಾಗವೇಣಿ, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲ. ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಪಿ.ಆನಂದರಾಜ್‌, ಜಯರಾಮನ್‌, ತಿರುಪತಿ, ಟಿ.ಶಿವರಾಜ್‌, ರಾಮಮೂರ್ತಿ, ಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT