ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸಿ

ಕೆರೆ– ರಾಜಕಾಲುವೆಗಳ ಒತ್ತುವರಿ: ರೈತ ಸಂಘ ಸದಸ್ಯರ ಧರಣಿ
Last Updated 6 ಅಕ್ಟೋಬರ್ 2020, 14:18 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.

‘ರಿಯಲ್‌ ಎಸ್ಟೇಟ್‌ ಮಾಫಿಯಾ ಜಿಲ್ಲೆಯ ಬಹುಪಾಲು ಕೆರೆಗಳು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿದೆ. ಕೆರೆಯಂಗಳ ಹಾಗೂ ರಾಜಕಾಲುವೆಗಳ ಜಾಗದಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತಿವೆ. ಲಂಚದಾಸೆಗೆ ಅಧಿಕಾರಿಗಳೇ ಈ ಅಕ್ರಮಕ್ಕೆ ಕೈಜೋಡಿಸಿದ್ದಾರೆ’ ಎಂದು ಧರಣಿನಿರತರು ದೂರಿದರು.

‘ಕೆರೆಗಳ ತವರು ಎಂದು ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ 2,800ಕ್ಕೂ ಹೆಚ್ಚು ಕೆರೆಗಳಿವೆ. ಈ ಹಿಂದೆ ಮಳೆಗಾಲದಲ್ಲಿ ಎಲ್ಲಾ ಕೆರೆಗಳು ತುಂಬುತ್ತಿದ್ದವು. ಆದರೆ, ಭೂಗಳ್ಳರ ಹಾವಳಿಯಿಂದ ಕೆರೆ, ರಾಜಕಾಲುವೆಗಳು ಕಣ್ಮರೆಯಾಗಿವೆ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ ಕಳವಳ ವ್ಯಕ್ತಪಡಿಸಿದರು.

‘ನಕಲಿ ದಾಖಲೆಪತ್ರ ಸೃಷ್ಟಿಸಿ ಗ್ರಾಮೀಣ ಭಾಗದ ಸರ್ಕಾರಿ ಗೋಮಾಳ, ಗುಂಡು ತೋಪು, ಸ್ಮಶಾನ, ಕೆರೆ ಅಂಗಳ ಒತ್ತುವರಿ ಮಾಡಲಾಗಿದೆ. ಆದರೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರಿ ಜಮೀನು ರಕ್ಷಿಸಬೇಕಾದ ಅಧಿಕಾರಿಗಳೇ ಭೂಗಳ್ಳರ ಜತೆ ಶಾಮೀಲಾಗಿದ್ದಾರೆ’ ಎಂದು ಕಿಡಿಕಾರಿದರು.

ಸ್ವರೂಪವೇ ಬದಲು: ‘ಪೂರ್ವಿಕರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ರಾಜಕಾಲುವೆಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಿದ್ದರು. ಈಗ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರು ಕೆರೆಗಳಿಗೆ ಹರಿಯುತ್ತಿಲ್ಲ. ಮತ್ತೊಂದೆಡೆ ಒತ್ತುವರಿಯಿಂದ ಕೆರೆ ಹಾಗೂ ರಾಜಕಾಲುವೆಗಳ ಮೂಲ ಸ್ವರೂಪವೇ ಬದಲಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಸಣ್ಣಪುಟ್ಟ ಜಮೀನು ಒತ್ತುವರಿ ಮಾಡುವ ರೈತರ ಮೇಲೆ ಶಿಸ್ತುಕ್ರಮ ಜರುಗಿಸುವ ಜಿಲ್ಲಾಡಳಿತ ಕೆರೆ, ರಾಜಕಾಲುವೆಗಳ ಒತ್ತುವರಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿ ತೆರೆಮರೆಯಲ್ಲಿ ರಿಯಲ್‌ ಎಸ್ಟೇಟ್‌ ದಂಧೆಕೋರರ ಜತೆ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮುತ್ತಿಗೆ ಎಚ್ಚರಿಕೆ: ‘ಕಂದಾಯ ಇಲಾಖೆ ಅಧಿಕಾರಿಗಳು ಕೆರೆ, ರಾಜಕಾಲುವೆಗಳು ಹಾಗೂ ಸರ್ಕಾರಿ ಜಮೀನುಗಳ ರಕ್ಷಣೆ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಒತ್ತುವರಿ ತೆರವು ಮಾಡಿಸಬೇಕು. ಒತ್ತುವರಿದಾದರಿಗೆ ನೆರವು ನೀಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ರಾಜ್ಯ ಘಟಕದ ಸಂಚಾಲಕ ನಾಗರಾಜ್‌ಗೌಡ, ಸದಸ್ಯರಾದ ಆಂಜಿನಪ್ಪ, ಆನಂದ್‌ರೆಡ್ಡಿ, ಲಕ್ಷ್ಮಣ್‌, ರಾಮಮೂರ್ತಿ, ಲೋಕೇಶ್, ಅನಿಲ್, ವೆಂಕಟರವಣ, ನಾರಾಯಣಸ್ವಾಮಿ, ಗಣೇಶ್, ಸಂದೀಪ್, ಸಂಜೀವಪ್ಪ, ಚಂದ್ರಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT