ಮಂಗಳವಾರ, ಮಾರ್ಚ್ 2, 2021
21 °C
ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್ ಕಳವಳ

ರಾಷ್ಟ್ರೀಯತೆ–ರಾಜ್ಯದ ನಡುವೆ ಕಂದಕ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆಗಳೆಂದು ಟೀಕಿಸುವವರು ಹೆಚ್ಚಾಗಿದ್ದಾರೆ. ಆದರೆ, ಅದೇ ಸಾಹಿತ್ಯದ ಜಾತ್ರೆಗಳು ಮನುಷ್ಯರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ ಎಂಬುದನ್ನು ಆ ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾರ್ಮಿಕವಾಗಿ ನುಡಿದರು.

ಇಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಸಾಹಿತ್ಯವು ಅನ್ವೇಷಣೆಗೆ ಎಡೆ ಮಾಡಿಕೊಡುತ್ತದೆ. ಸಾಹಿತ್ಯವು ಲೋಕವನ್ನು ಬದಲಾಯಿಸಲ್ಲ, ಮನುಷ್ಯರನ್ನು ಬದಲಾಯಿಸುತ್ತದೆ. ಸಾಹಿತ್ಯ ಸಮ್ಮೇಳನಗಳು ಸಾಂಸ್ಕೃತಿಕ ಹಬ್ಬಗಳಾಗಿದ್ದು, ಅವುಗಳ ಮಹತ್ವ ಅರಿತು ತಾವು ಏನೆಂದು ಅರ್ಥ ಮಾಡಿಕೊಳ್ಳುವ ಅವಕಾಶಗಳಿವೆ’ ಎಂದರು.

‘ರಾಷ್ಟ್ರೀಯತೆ ಮತ್ತು ರಾಜ್ಯಗಳ ನಡುವೆ ಕಂದಕ ಸೃಷ್ಟಿಯಾಗಿರುವುದರಿಂದ ಭಾಷೆಗಳ ಮೇಲೆ ಪರಿಣಾಮ ಬೀರುತ್ತಿದೆ. ರಾಷ್ಟ್ರೀಯತೆ ಮತ್ತು ರಾಜ್ಯಗಳ ನಡುವಿನ ಸಂಬಂಧ ಕಡಿದು ಹೋಗಿ ರಾಷ್ಟ್ರ ದ್ರೋಹ ಹಾಗೂ ಭಕ್ತಿಯ ನಡುವೆ ಸಂಘರ್ಷ ಏರ್ಪಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅವಿವೇಕ ಮತ್ತು ಅಹಂಕಾರದಿಂದ ಮನೆ, ಮನಸ್ಸು, ಜಾತಿಗಳು ಹೊಡೆದು ಹೋಗುತ್ತಿವೆ. ಜತೆಗೆ ಸಾಹಿತ್ಯ, ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಇವುಗಳ ಜಾಗದಲ್ಲಿ ವಿವೇಕ ಮತ್ತು ನಿರಹಂಕಾರ ನಿರ್ಮಾಣ ಮಾಡದಿದ್ದರೆ ಸಾಹಿತ್ಯ, ಸಂಸ್ಕೃತಿ ಸೋಲುತ್ತವೆ’ ಎಂದು ಎಚ್ಚರಿಸಿದರು.

‘ಕನ್ನಡ ಕೊಟ್ಟಿರುವ ರಾಷ್ಟ್ರೀಯ ಪರಿಕಲ್ಪನೆಯು ವಿಶ್ವರೂಪಿಯಾಗಿದ್ದು, ಅದರ ಮೂಲ ಸಂಸ್ಕೃತಿಯೊಳಗೆ ಧಾತುಗಳಿವೆ. ಅದು ರಾಜಕೀಯ ಅಥವಾ ಯಾವುದೇ ಮೌಲ್ಯದಿಂದ ಆಗಿಲ್ಲ. ಪರಭಾಷಿಕರಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿಲ್ಲ. ಬದಲಿಗೆ ನಮ್ಮ ನಿರ್ಲಕ್ಷ್ಯತೆ, ಬದ್ಧತೆಯಿಲ್ಲದ ಬದುಕಿನ ಕ್ರಮದಿಂದ ಭಾಷೆಯನ್ನು ಇಲ್ಲವಾಗಿಸುತ್ತಿದ್ದೇವೆ’ ಎಂದು ವಿಷಾದಿಸಿದರು.

‘ನಮ್ಮ ವಿಚಾರಕ್ಕೆ ಕೊರತೆಯಿಲ್ಲ. ಆದರೆ, ಆಚಾರದಲ್ಲಿ ಕೊರತೆಯಿದೆ. ಇದರಿಂದ ಪತನಕ್ಕೆ ಒಳಗಾಗುತ್ತಿದ್ದೇವೆ. ಜನರ ಆಚಾರ ವಿಚಾರ ಬೇರೆಯಾಗಿದ್ದು, ನಾವು ಹೇಳುವುದು ಒಂದಾದರೆ ಬದುಕುವ ರೀತಿ ಮತ್ತೊಂದಾಗಿದೆ. ಮನುಷ್ಯನ ಮನಸ್ಸಿನಲ್ಲಿರುವ ಅಸ್ಪೃಶ್ಯತೆಯ ಕೊಳಕು ಹೋಗಬೇಕು’ ಎಂದು ಆಶಿಸಿದರು.

ಕನ್ನಡ ಭವನ: ‘ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಕನ್ನಡ ಭವನದ ಕಾಮಗಾರಿ ಪೂರ್ಣಗೊಳಿಸಿ ಕನ್ನಡದ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲು ಅವಕಾಶ ಕಲ್ಪಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

‘ಕನ್ನಡದ ಕೆಲಸಗಳಿಗೆ ಸದಾ ನನ್ನ ಸಹಕಾರವಿದೆ. ಕನ್ನಡ ಭವನದ ಕೆಲಸ ಪೂರ್ಣಗೊಳಿಸಲು ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ ₹ 10 ಲಕ್ಷ ಬಿಡುಗಡೆ ಮಾಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಭರವಸೆ ನೀಡಿದರು.

ಕೀಳರಿಮೆ ಬೇಡ ‘ಪೋಷಕರು ಆಂಗ್ಲ ಭಾಷೆಯ ವ್ಯಾಮೋಹ ಬಿಟ್ಟು, ಮಕ್ಕಳಿಗೆ ಕನ್ನಡ ಭಾಷೆ ಬಗ್ಗೆ ಪ್ರೀತಿ ಬೆಳೆಸಬೇಕು. ಮಾತೃ ಭಾಷೆ ಮಾತನಾಡಲು ಕೀಳರಿಮೆ ಬೇಡ. ಕನ್ನಡೇತರರು ಸಹ ಭಾಷೆ ಅಭಿವೃದ್ಧಿಗೆ ಶ್ರಮಿಸಬೇಕು. ಪರಭಾಷಿಕರೂ ಕನ್ನಡ ಕಲಿತು ದೈನಂದಿನ ಜೀವನದಲ್ಲಿ ಬಳಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಿವಿಮಾತು ಹೇಳಿದರು.

‘ಕನ್ನಡ ಭಾಷೆ ಪ್ರಭುತ್ವ ಸಾಧಿಸಲು ದೈನಂದಿನ ಎಲ್ಲಾ ವ್ಯವಹಾರಗಳಲ್ಲೂ ಮಾತೃ ಭಾಷೆ ಬಳಕೆಯಾಗಬೇಕು. ಆಗ ಮಾತ್ರ ಹೊರ ರಾಜ್ಯ ಹಾಗೂ ವಿದೇಶದಲ್ಲೂ ಕನ್ನಡ ಭಾಷೆಗೆ ಮನ್ನಣೆ ಸಿಗುತ್ತದೆ. ಸರ್ಕಾರಿ ಕೆಲಸವೇ ಬೇಕೆಂಬ ಮನೋಭಾವನೆಯಿಂದ ಹೊರ ಬರಬೇಕು. ಪ್ರತಿ ಮನೆಯಲ್ಲೂ ಕನ್ನಡ ಬಳಕೆಯ ಕ್ರಾಂತಿ ಆಗಬೇಕು’ ಎಂದು ಆಶಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಶ್ರೀನಿವಾಸಗೌಡ, ಸಮ್ಮೇಳನಾಧ್ಯಕ್ಷರಾದ ಸಾಹಿತಿ ವಿ.ಮುನಿವೆಂಕಟಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಶ್ವೇತಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.