ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ನಷ್ಟ: ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿ

ಅವಧಿ ಪೂರ್ವ ಮಳೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಸೂಚನೆ
Last Updated 21 ಮೇ 2022, 14:36 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಅವಧಿ ಪೂರ್ವ ಮುಂಗಾರು ಮಳೆಯಿಂದ ಸಾಕಷ್ಟು ಬೆಳೆ ನಷ್ಟವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟ ಪರಿಹಾರಕ್ಕಾಗಿ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಸೂಚಿಸಿದರು.

ಜಿಲ್ಲೆಯ ಮಳೆ ಪರಿಸ್ಥಿತಿ ಹಾಗೂ ಬೆಳೆ ನಷ್ಟದ ಸಂಬಂಧ ಇಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕಳೆದ ವರ್ಷ ನಿರೀಕ್ಷೆಗೂ ಮೀರಿ ಮಳೆಯಾಗಿತ್ತು. ಈ ಬಾರಿ ಸಹ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆ ಆಗಬಾರದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ 6,343 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಪ್ರಮುಖವಾಗಿ ಕೊಯ್ಲು ಹಂತದಲ್ಲಿದ್ದ ಮಾವು 5,800 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. 300 ಹೆಕ್ಟೇರ್ ಟೊಮೆಟೊ, 40 ಹೆಕ್ಟೇರ್ ಕ್ಯಾಪ್ಸಿಕಂ, 300 ಹೆಕ್ಟೇರ್‌ ಹೂವು ಮತ್ತು ಇತರೆ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿಯಂತೆ ₹ 11 ಕೋಟಿ ಪರಿಹಾರ ಧನದ ಅಗತ್ಯವಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸತತ ಮಳೆ ಸುರಿದಿದೆ. ಮೇ 20ರವರೆಗೆ ಅತಿ ಹೆಚ್ಚು 280 ಮಿ.ಮೀ ಮಳೆಯಾಗಿದೆ. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನು ಸಾಕಷ್ಟಿದ್ದು, ಕೊರತೆ ಉಂಟಾಗುವುದಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ವಿವರಿಸಿದರು.

ಅಂಗವಿಕಲರ ಶಿಕ್ಷಣ: ‘ಪಿ.ಎಂ ಕಿಸಾನ್ ಯೋಜನೆಯಡಿ 20 ವಿವಿಧ ಸೌಲಭ್ಯಗಳು ಲಭ್ಯವಿದೆ. ಈ ಯೋಜನೆಗಳ ಪ್ರಯೋಜನ ಪಡೆಯುವಂತೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು. ಅಂಗವಿಕಲರಿಗೆ ಗಾಲಿ ಕುರ್ಚಿ, ಕಂಪ್ಯೂಟರ್ ಸ್ಕ್ರೀನ್‌ ರೀಡರ್, ಆಡಿಯೋ ಪುಸ್ತಕ ಒದಗಿಸಿ. ಅಂಗವಿಕಲರಿಗೆ ಸಿಗುವ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಬೇಕು. ಅಂಗವಿಕಲರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಉಮಾ ಮಹದೇವನ್‌ ಹೇಳಿದರು.

‘ಪ್ರತಿ ಆಸ್ಪತ್ರೆಯಲ್ಲೂ ವೈದ್ಯಕೀಯ ಆಮ್ಲಜನಕ ಲಭ್ಯವಿರಬೇಕು. ಕೋವಿಡ್ ಲಸಿಕೆ ನೀಡಿಕೆ ತ್ವರಿತಗೊಳಿಸಿ. ಈ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಿ. 60 ವರ್ಷ ದಾಟಿದ ಹಿರಿಯರಿಗೆ ಕಡ್ಡಾಯವಾಗಿ ಬೂಸ್ಟರ್ ಡೋಸ್‌ ಲಸಿಕೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಕೋವಿಡ್‌ ಲಸಿಕೆ ತೆಗೆದುಕೊಳ್ಳುವಂತೆ ಜನರಿಗೆ ಅರಿವು ಮೂಡಿಸಿ’ ಎಂದು ಸೂಚನೆ ನೀಡಿದರು.

‘ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ಪ್ರತಿಯೊಬ್ಬರಿಗೂ ವಿತರಿಸಬೇಕು. ಈ ಕಾರ್ಡ್ ಪಡೆಯುವುದರಿಂದ ಬಡ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಸಿಗುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.‌

‘ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ಮೂಲಸೌಕರ್ಯ ಒದಗಿಸಿ. ಪ್ರತಿ ತಿಂಗಳು ಕೆ.ಸಿ ವ್ಯಾಲಿ ಯೋಜನೆ ನೀರಿನ ಪರೀಕ್ಷೆ ಮಾಡಬೇಕು. ಕೆ.ಸಿ ವ್ಯಾಲಿ ನೀರಿನ ಬಗ್ಗೆ ಹೆಚ್ಚು ಗಮನಹರಿಸಿ’ ಎಂದು ತಿಳಿಸಿದರು.

ಮುಕ್ತಾಯ ಹಂತದಲ್ಲಿದೆ: ‘ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಕೋವಿಡ್‍ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಧನ ವಿತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಹೇಳಿದರು.

‘ಜಿಲ್ಲೆಯಲ್ಲಿ ಕೋವಿಡ್ ಒಂದನೇ ಅಲೆಯಲ್ಲಿ 63,013 ಪ್ರಕರಣ ದಾಖಲಾಗಿದ್ದವು. ಈ ಪೈಕಿ 667 ಮಂದಿ ಮೃತಪಟ್ಟಿದ್ದರು. 2ನೇ ಅಲೆಯ ನಂತರ ಪ್ರತಿ ಶಾಲೆಗೂ ಭೇಟಿ ನೀಡಿ 12 ವರ್ಷ ದಾಟಿದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಯಿತು. ಮೊದಲನೇ ಅಲೆಯಲ್ಲಿ ಶೇ 92ರಷ್ಟು ಲಸಿಕೆ ನೀಡಿದ್ದೇವೆ. ಎರಡನೇ ಅಲೆಯಲ್ಲಿ ಶೇ 79ರಷ್ಟು ಲಸಿಕೆ ಹಾಕಲಾಗಿದೆ' ಎಂದು ಜಿಲ್ಲಾ ಆರೋಗ್ಯ ಮುತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ವಿವರಿಸಿದರು.

ಭಯೋತ್ಪಾದನಾ ವಿರೋಧಿ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್‌ ಮೀನಾ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT