ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ನಷ್ಟ: ಕಾಟಾಚಾರದ ಪರಿಶೀಲನೆ: ಸಿದ್ದರಾಮಯ್ಯ ಗುಡುಗು

ಮುಖ್ಯಮಂತ್ರಿಯವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗು
Last Updated 25 ನವೆಂಬರ್ 2021, 2:50 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೂ ಹೋಗುತ್ತಿಲ್ಲ. ನಾವೆಲ್ಲಾ ಹೇಳಿದ ಮೇಲೆ ಮುಖ್ಯಮಂತ್ರಿಯವರು ಕಾಟಾಚಾರಕ್ಕೆ ಬೆಳೆ ನಷ್ಟದ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಜಿಲ್ಲೆಯ ಕೋಲಾರ ತಾಲ್ಲೂಕಿನ ಜೋಡಿಕೃಷ್ಣಾಪುರ, ಖಾಜಿಕಲ್ಲಹಳ್ಳಿ, ನಾಗಾಲಾಪುರ, ಬಂಗಾರಪೇಟೆ ತಾಲ್ಲೂಕಿನ ಎ.ಗೊಲ್ಲಹಳ್ಳಿಯಲ್ಲಿ ಮಳೆಯಿಂದ ಆಗಿರುವ ಬೆಳೆ ನಷ್ಟ, ಮನೆ ಕುಸಿತದ ಬಗ್ಗೆ ಬುಧವಾರ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಸರ್ಕಾರ ಈ ವೇಳೆಗಾಗಲೇ ಮಳೆಯಿಂದ ಆದ ಬೆಳೆ ನಷ್ಟದ ಸಮೀಕ್ಷೆ ಮಾಡಿಸಬೇಕಿತ್ತು. ಆದರೆ, ಈವರೆಗೂ ಸಮೀಕ್ಷೆ ಮಾಡಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಇನ್ನು ತಡ ಮಾಡಬಾರದು. ಕೂಡಲೇ ಬೆಳೆ ನಷ್ಟದ ಸಮೀಕ್ಷೆ ಮಾಡಿಸಬೇಕು. ಮಳೆಯಿಂದ ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿದೆ. ಮತ್ತೊಂದೆಡೆ ಜನ ಸತ್ತಿದ್ದಾರೆ, ರಸ್ತೆಗಳು ಹಾಳಾಗಿವೆ. ವಿದ್ಯುತ್ ಕಂಬ ಮತ್ತು ಮನೆಗಳು ಬಿದ್ದಿವೆ. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಬೇಕು. ಇದು ಸರ್ಕಾರದ ಕೆಲಸ. ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಬೆಳೆ ನಷ್ಟಕ್ಕೆ ಎನ್‍ಡಿಆರ್‍ಎಫ್ ಮಾನದಂಡದ ಪ್ರಕಾರವೇ ಪರಿಹಾರ ಕೊಡಬೇಕಿಲ್ಲ. ಸರ್ಕಾರ ತನ್ನ ಖಜಾನೆಯಿಂದಲೂ ಪರಿಹಾರ ಕೊಡಬೇಕು. ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಪರಿಹಾರ ಕೊಡಬಾರದೆಂದು ನಿಯಮವೇನಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಜತೆಗೆ ಡಿ.13ರಿಂದ ಆರಂಭವಾಗುವ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇನೆ. ರೈತರಿಗೆ ಖಜಾನೆಯಿಂದ ಹೆಚ್ಚಿನ ಪರಿಹಾರ ಕೊಟ್ಟರೆ ಸಂತೋಷ. ಇಲ್ಲವಾದರೆ ಒತ್ತಾಯ ಮಾಡುತ್ತೇವೆ’ ಎಂದರು.

ಶೀಘ್ರವೇ ಸ್ಪಂದಿಸಬೇಕು: ‘ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಳೆಯಿಂದ ಭತ್ತ, ರಾಗಿ ಬೆಳೆ ನೆಲಕ್ಕಚ್ಚಿದ್ದವು. ಆಗ ಪ್ರತಿ ಹೆಕ್ಟೇರ್‌ಗೆ ₹ 25 ಸಾವಿರ ಪರಿಹಾರ ಕೊಟ್ಟಿದ್ದೆವು. ಅದು ಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ ನೀಡಿದ್ದಲ್ಲ. ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಪರಿಹಾರ ನೀಡಿದ್ದು. ಕಬ್ಬಿನ ಬೆಲೆ ಕಡಿಮೆಯಾದಾಗಲೂ ಪರಿಹಾರ ಕೊಟ್ಟಿದ್ದೆವು. ಅದೇ ರೀತಿ ಸರ್ಕಾರ ಶೀಘ್ರವೇ ಜನರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹ 500 ಕೋಟಿ ಹಣವಿದ್ದರೂ ನಷ್ಟದ ಸಮೀಕ್ಷೆ ಮಾಡದೆ ಪರಿಹಾರ ಕೊಡುವುದಾದರೂ ಹೇಗೆ? ಟೊಮೆಟೊ ಮತ್ತು ಹೂವು ಬೆಳೆಗೆ ಎಕರೆಗೆ ಕನಿಷ್ಠ ₹ 2 ಲಕ್ಷ ಖರ್ಚಾಗುತ್ತದೆ. ರೈತರು ಬಡ್ಡಿ ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಪರಿಹಾರ ಕೊಡಬೇಕಲ್ಲ ಎಂಬ ಕಾರಣಕ್ಕೆ ₹ 5ರಿಂದ 10 ಸಾವಿರ ಕೊಟ್ಟರೆ ಏನು ಪ್ರಯೋಜನ?’ ಎಂದು ಪ್ರಶ್ನಿಸಿದರು.

ನೀತಿಸಂಹಿತೆ ಅಡ್ಡಿಯಿಲ್ಲ: ‘ರಾಜ್ಯದಲ್ಲಿ ಮಳೆಯಿಂದ ಸುಮಾರು 5 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕೋಲಾರ ಜಿಲ್ಲೆ ಒಂದರಲ್ಲೇ ಸುಮಾರು 50 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಪರಿಹಾರ ನೀಡಲು ಚುನಾವಣಾ ನೀತಿಸಂಹಿತೆ ಅಡ್ಡಿಯಿಲ್ಲ,‌ ಬೆಳೆ ನಷ್ಟದ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಸಿ ಹೆಚ್ಚಿನ ಪರಿಹಾರ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಲ್ಕೈದು ಪಟ್ಟು ಹೆಚ್ಚು ಬೆಳೆ ನಷ್ಟವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಟೊಮೆಟೊ ಬೆಳೆಗೆ ಹಾಕಿದ ಬಂಡವಾಳದಲ್ಲಿ ರೈತರಿಗೆ ಕನಿಷ್ಠ ₹ 1 ಬಂದಿಲ್ಲ. ಹಗಲಿರುಳು ಶ್ರಮಪಟ್ಟು ಬೆಳೆದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ನಷ್ಟವಾಗಿದೆ. ಬ್ಯಾಂಕ್, ಸೊಸೈಟಿಗಳಿಂದ ಸಾಲ ಪಡೆದು ಬೆಳೆ ಮಾಡಿದ್ದ ರೈತರು ಈಗ ಮಳೆಯಿಂದ ಮತ್ತಷ್ಟು ಸಾಲಗಾರರಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕರಾದ ಕೆ.ಆರ್.ರಮೇಶ್‍ಕುಮಾರ್, ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಎಸ್‌.ಎನ್‌.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ನಜೀರ್ ಅಹಮ್ಮದ್‌ ಹಾಜರಿದ್ದರು.

ಜೆಡಿಎಸ್‌ ಶಾಸಕರ ಮನೆಯಲ್ಲಿ ಆತಿಥ್ಯ

ಕೋಲಾರ ಜಿಲ್ಲಾ ಕೇಂದ್ರದ ವಿವಿಧೆಡೆ ಮಳೆಯಿಂದ ಮನೆಗಳು ಕುಸಿದಿರುವ ಬಗ್ಗೆ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರ ಮನೆಯಲ್ಲಿ ಮಧ್ಯಾಹ್ನದ ಭೋಜನ ಸವಿದರು. ಜೆಡಿಎಸ್‌ನಿಂದ ಈಗಾಗಲೇ ದೂರವಾಗಿರುವ ಶ್ರೀನಿವಾಸಗೌಡರು ಕಾಂಗ್ರೆಸ್‌ ಸೇರುವುದಾಗಿ ಹೇಳಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡರು ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT