ಶನಿವಾರ, ಏಪ್ರಿಲ್ 4, 2020
19 °C
ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸೂಚನೆ

₹50 ಕೋಟಿ ಠೇವಣಿ ಸಂಗ್ರಹ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬ್ಯಾಂಕ್‌ ಸಿಬ್ಬಂದಿಯು ಮಾರ್ಚ್‌ 28ರೊಳಗೆ ಕನಿಷ್ಠ ₹ 50 ಕೋಟಿ ಠೇವಣಿ ಸಂಗ್ರಹಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿಯ ಮಟ್ಟಕ್ಕೆ ವೇತನ ಮತ್ತು ಸೌಲಭ್ಯ ನೀಡಿದ್ದೇವೆ. ಸಿಬ್ಬಂದಿಯು ಸಂಸ್ಥೆಯನ್ನು ದೇವಾಲಯದಂತೆ ಪರಿಗಣಿಸಿ ಠೇವಣಿ ಗುರಿ ಸಾಧನೆಗೆ ಶ್ರಮಿಸಬೇಕು. ಇದರಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದರು.

‘ರಾಷ್ಟ್ರ ಮಟ್ಟದ ಸಾಧನೆ ಮೂಲಕ ನಬಾರ್ಡ್‌ನ ಗಮನ ಸೆಳೆದಿರುವ ಬ್ಯಾಂಕ್‌ನ ಮಹತ್ವ ಮುಂದುವರಿಸಿಕೊಂಡು ಹೋಗಬೇಕು. ಬ್ಯಾಂಕ್‌ನ ಸಾಧನೆ ಕುರಿತು ನಬಾರ್ಡ್‌ ರೂಪಿಸಿರುವ ಸಾಕ್ಷ್ಯಚಿತ್ರವು ಬೆಂಗಳೂರಿನಲ್ಲಿ ಮಾರ್ಚ್‌ 18ರಂದು ಬಿಡುಗಡೆಯಾಗುತ್ತದೆ. ಇದು ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಶ್ರಮಕ್ಕೆ ಸಂದ ಗೌರವ’ ಎಂದು ತಿಳಿಸಿದರು.

‘ಸಿಬ್ಬಂದಿಯು ಸಾಲ ಮತ್ತು ಸುಸ್ತಿ ಸಾಲ ಉಳಿಸಿಕೊಳ್ಳದೆ ಸಕಾಲಕ್ಕೆ ವಸೂಲಿ ಮಾಡುವ ಮೂಲಕ ವಸೂಲಾಗದ ಸಾಲವನ್ನು (ಎನ್‌ಪಿಎ) ಶೇ 2ಕ್ಕೆ ಇಳಿಸಬೇಕು. ಬ್ಯಾಂಕ್‌ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಬೇಕು. ಮಹಿಳೆಯರು ಮತ್ತು ರೈತರು ಬಡ್ಡಿ ಮಾಫಿಯಾಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು. ಬ್ಯಾಂಕ್‌ ಬಡವರ ಆಶಾಕಿರಣವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಸಾಲ ವಸೂಲಿ ಕಷ್ಟ ಎಂಬುದನ್ನು ಸಿಬ್ಬಂದಿ ಅರ್ಥ ಮಾಡಿಕೊಂಡು ಸಾಲ ಮಂಜೂರಾತಿ ವೇಳೆ ಇಡೀ ಕುಟುಂಬದ ಸದಸ್ಯರ ಜತೆ ಚರ್ಚಿಸಿ ಸಾಲ ನೀಡಬೇಕು. ಬ್ಯಾಂಕ್‌ನ ನಿರ್ದೇಶಕರು ಶಿಫಾರಸು ಮಾಡಿದ್ದಾರೆಂದು ಕಣ್ಣು ಮುಚ್ಚಿಕೊಂಡು ಸಾಲ ನೀಡಬಾರದು. ಸಾಲ ಸುಸ್ತಿಯಾದರೆ ಸಿಬ್ಬಂದಿಯೇ ಹೊಣೆ. ಆದ್ದರಿಂದ ಗ್ರಾಹಕರ ಪೂರ್ವಾಪರ ಪರಿಶೀಲಿಸಿ ಸಾಲ ನೀಡಬೇಕು’ ಎಂದರು.

ಸಾಲ ಮನ್ನಾ: ‘ಅಲ್ಪಾವಧಿ ಸಾಲ ಪಡೆದಿರುವ ಜಿಲ್ಲೆಯ 1,014 ರೈತರ ₹ 9.24 ಕೋಟಿ ಸಾಲ ಮನ್ನಾ ಆಗಿದ್ದು, ಈ ಪ್ರಕ್ರಿಯೆ ಮಾರ್ಚ್‌ 25ರೊಳಗೆ ಪೂರ್ಣಗೊಳ್ಳುತ್ತದೆ. ಸಿಬ್ಬಂದಿ ರೈತರನ್ನು ಸಂಪರ್ಕಿಸಿ ಅಗತ್ಯ ದಾಖಲೆಪತ್ರ ಪಡೆದು ಸಾಲ ಮನ್ನಾ ಯೋಜನೆಯ ಲಾಭ ದೊರಕುವಂತೆ ಮಾಡಬೇಕು’ ಎಂದು ಆದೇಶಿಸಿದರು.

‘ಮಂಗಳೂರಿನಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಯಶಸ್ವಿಯಾಗಿದೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಲಿದೆ. ನಬಾರ್ಡ್ 2 ವಾಹನಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿ ವಾಹನ ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ ಕುಮಾರ್, ಎನ್‌.ಮೋಹನ್‌ರೆಡ್ಡಿ, ಎನ್.ನಾಗಿರೆಡ್ಡಿ, ಬಿ.ವಿ.ವೆಂಕಟರೆಡ್ಡಿ, ಕೆ.ಎಚ್.ಚನ್ನರಾಯಪ್ಪ, ವ್ಯವಸ್ಥಾಪಕ ನಿರ್ದೇಶಕ ರವಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು