ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.50 ಕೋಟಿ ಅಕ್ರಮ: ಸಿಬಿಐ ತನಿಖೆ

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಹೇಳಿಕೆ
Last Updated 12 ಮಾರ್ಚ್ 2020, 13:53 IST
ಅಕ್ಷರ ಗಾತ್ರ

ಕೋಲಾರ: ‘ಆಯೋಗದಿಂದ ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ ನಡೆದ ಅಕ್ರಮವು ಇಡೀ ರಾಜ್ಯದ ಮೇಲೆ ಪರಿಣಾಮ ಬೀರಿತು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ತಾಕೀತು ಮಾಡಿದರು.

ಇಲ್ಲಿ ಗುರುವಾರ ನಡೆದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಪ್ರಗತಿ ಪರಿಶೀಲನೆ ಹಾಗೂ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ₹ 1.50 ಕೋಟಿ ಅವ್ಯವಹಾರ ನಡೆದಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ’ ಎಂದು ಹೇಳಿದರು.

‘ಅರ್ಹ ಫಲಾನುಭವಿಗಳಿಗೆ ಸಾಲ ವಿತರಣೆ ಸಮರ್ಪಕವಾಗಿ ನಡೆಯದ ಕಾರಣ ಆಯೋಗಕ್ಕೆ ದೂರು ಬಂದವು. ಹೀಗಾಗಿ ಈ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಲಾಗಿದೆ. ಜಿಲ್ಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಅರಿವಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದೆ. ಇದರಿಂದ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರಿಗೆ ಸರ್ಕಾರದ ಯೋಜನೆ ತಲುಪಿಸುವುದರ ಜತೆಗೆ ಅವರ ಉನ್ನತೀಕರಣಕ್ಕೆ ಶ್ರಮಿಸಬೇಕು. ಪೌರ ಕಾರ್ಮಿಕರು ಸ್ವಚ್ಛತಾ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಅರಿವು ಮೂಡಿಸಬೇಕು. ಸಫಾಯಿ ಕರ್ಮಚಾರಿಗಳನ್ನು ಉನ್ನತೀಕರಿಸಲು ಸ್ವಂತ ಮನೆ ಹಾಗೂ ಉತ್ತಮ ಆರೋಗ್ಯ ಸೇವೆ ಕಲ್ಪಿಸಬೇಕು’ ಎಂದು ಸೂಚಿಸಿದರು.

635 ಪೌರ ಕಾರ್ಮಿಕರು

‘ಜಿಲ್ಲೆಯಲ್ಲಿ 212 ಕಾಯಂ ಕಾರ್ಮಿಕರು, ಸಮಾನ ಕೆಲಸ ಸಮಾನ ವೇತನದ 29, ದಿನಗೂಲಿಯ 45 ಮಂದಿ ಹಾಗೂ ಹೊರಗುತ್ತಿಗೆಯ 349 ಪೌರ ಕಾರ್ಮಿಕರು ಸೇರಿದಂತೆ ಒಟ್ಟು 635 ಪೌರ ಕಾರ್ಮಿಕರಿದ್ದಾರೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಂಗಸ್ವಾಮಿ ಮಾಹಿತಿ ನೀಡಿದರು.

‘ಕೋಲಾರ ನಗರಸಭೆಯಲ್ಲಿ 189, ಕೆಜಿಎಫ್ ನಗರಸಭೆಯಲ್ಲಿ 121, ಮುಳಬಾಗಿಲು ನಗರಸಭೆಯಲ್ಲಿ 81, ಬಂಗಾರಪೇಟೆ ಪುರಸಭೆಯಲ್ಲಿ 115, ಮಾಲೂರು ಪುರಸಭೆಯಲ್ಲಿ 89 ಹಾಗೂ ಶ್ರೀನಿವಾಸಪುರ ಪುರಸಭೆಯಲ್ಲಿ 40 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಕಾಲಕ್ಕೆ ಸೌಕರ್ಯ ತಲುಪಿಸುತ್ತಿದ್ದೇವೆ’ ಎಂದರು.

ಗುರುತಿನ ಚೀಟಿ

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಹಿರೇಮಣಿ, ‘ಕಾಗದದ ಮೇಲೆ ಅಂಕಿ ಅಂಶ ಬರೆದು ಕೊಡುವುದು ಸುಲಭ. ಪ್ರಾಯೋಗಿಕವಾಗಿ ಪ್ರಗತಿ ಸಾಧಿಸದೆ ಅಂಕಿ ಅಂಶ ನೀಡುವುದರಲ್ಲಿ ಅರ್ಥವಿಲ್ಲ. ಜಿಲ್ಲೆಯ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಅವರಿಗೆ ಸುರಕ್ಷತಾ ಸಲಕರಣೆ ಯಾಕೆ ಕೊಟ್ಟಿಲ್ಲ?’ ಎಂದು ಪ್ರಶ್ನಿಸಿದರು.

‘ಸುರಕ್ಷತಾ ಕ್ರಮಗಳ ಬಗ್ಗೆ ಆರೋಗ್ಯ ನಿರೀಕ್ಷಕರು ಪೌರ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಶೀಘ್ರವೇ ಸುರಕ್ಷತಾ ಸಲಕರಣೆ ಕಲ್ಪಿಸಬೇಕು. ಜಿಲ್ಲೆಯಾದ್ಯಂತ 1,991 ಮಂದಿ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿದ್ದು, ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಜತೆಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕು’ ಎಂದು ಆದೇಶಿಸಿದರು.

‘ಅರ್ಹರಲ್ಲವದವರು ಸದಸ್ಯತ್ವ ಪಡೆದುಕೊಂಡು ಸೌಕರ್ಯ ಪಡೆಯುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಶಿಸ್ತುಕ್ರಮ ಜರುಗಿಸಬೇಕು. ಎಲ್ಲಾ ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಿಸಬೇಕು. ಇಎಸ್‍ಐ ಸೌಕರ್ಯ ಕಲ್ಪಿಸಬೇಕು’ ಎಂದು ಹೇಳಿದರು.

ತಾತ್ಸರ ಮನೋಭಾವ

‘ಅಧಿಕಾರಿಗಳು ಪೌರ ಕಾರ್ಮಿಕರು ಬಗ್ಗೆ ತಾತ್ಸರ ಮನೋಭಾವ ತೋರುತ್ತಾರೆ. ಹಗಲು ರಾತ್ರಿ ಕೆಲಸ ಮಾಡುವವರಿಗೆ ಸೌಕರ್ಯ ಕಲ್ಪಿಸುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಬೆದರಿಕೆ ಹಾಕುತ್ತಾರೆ. ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ಸಹ ನೀಡಿಲ್ಲ. ಸಕಾಲಕ್ಕೆ ಆರೋಗ್ಯ ಶಿಬಿರ ನಡೆಸುತ್ತಿಲ್ಲ. ವಿವಿಧ ಯೋಜನೆಗಳಲ್ಲಿ ಪೌರ ಕಾರ್ಮಿಕರ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಸಿ.ರವಣಪ್ಪ ಗಂಭೀರ ಆರೋಪ ಮಾಡಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಆರ್.ರಮಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT