ಭಾನುವಾರ, ಮೇ 16, 2021
24 °C
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ ಅಭಿಪ್ರಾಯ

ದಾಸಿಮಯ್ಯ ವಚನ ಸಾಹಿತ್ಯದ ಆದ್ಯ ಪ್ರವರ್ತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇವರ ದಾಸಿಮಯ್ಯ ರಚಿಸಿರುವ ವಚನಗಳು ಸಾರ್ವಕಾಲಿಕ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಮಾತನಾಡಿ, ‘ಸಾಮಾಜಿಕ ನ್ಯಾಯ ಪ್ರತಿಪಾದಿಸುವ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಜತೆಗೆ ವಚನಕಾರರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ಜನಿಸಿದ ದಾಸಿಮಯ್ಯ ಬಾಲ್ಯದಿಂದಲೇ ರಾಮನಾಥನನ್ನು ಆರಾಧ್ಯ ದೈವವಾಗಿಸಿಕೊಂಡು ಪೂಜಿಸುತ್ತಿದ್ದರು. ಲೋಕ ಕಲ್ಯಾಣಾರ್ಥ ದೇಶ ಪರ್ಯಟನೆ ಮಾಡಿ ಹಿಂಸೆ ವೃತ್ತಿಯಲ್ಲಿ ತೊಡಗಿದ್ದ ಬೇಟೆಗಾರರಿಗೆ ಜ್ಞಾನೋಪದೇಶ ನೀಡಿದರು. ವಚನಕಾರರಾದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ದರಾಮ ಅವರು ವಚನಗಳನ್ನು ರಚಿಸುವ ಮೊದಲೇ ದೇವರ ದಾಸಿಮಯ್ಯ ವಚನಗಳನ್ನು ರಚಿಸಿ ಮೊದಲ ವಚನಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ’ ಎಂದು ಬಣ್ಣಿಸಿದರು.

‘ದಾಸಿಮಯ್ಯ 11ನೇ ಶತಮಾನದ ನೇಕಾರ ಸಂತ. ಅವರು ಮೇಲ್ವರ್ಗ ಹಾಗೂ ಕೆಳ ವರ್ಗವೆಂಬ ಬೇಧವಿಲ್ಲದೆ ವಚನಗಳ ಮೂಲಕ ಸಮಾನತೆ ಮೂಡಿಸಲು ಪ್ರಯತ್ನಿಸಿದರು. ಅವರ ವಚನಗಳನ್ನು ಓದುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಅವರ ಆಶಯ, ಚಿಂತನೆ ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ­ಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಆದ್ಯ ಪ್ರವರ್ತಕ: ‘ದೇವರ ದಾಸಿಮಯ್ಯ ವೃತ್ತಿಯಲ್ಲಿ ನೇಕಾರರಾಗಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರಲ್ಲಿ ಜಾಗೃತಿ ಮೂಡಿಸಲು ಸಾವಿರಾರು ವಚನಗಳನ್ನು ರಚಿಸಿದ ಅವರು ವಚನ ಸಾಹಿತ್ಯದ ಆದ್ಯ ಪ್ರವರ್ತಕರು’ ಎಂದರು.

‘ನೇಕಾರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ನೇಕಾರರು ರಾಜಕೀಯವಾಗಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಪೋಷಕರು ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಬೇಕು. ನೇಕಾರ ವೃತ್ತಿಯನ್ನೇ ನಂಬಿ ಬದುಕು ನಡೆಸುವುದು ಸಾಧ್ಯವಿಲ್ಲ. ಈ ವೃತ್ತಿಯ ಜತೆಗೆ ಬೇರೆ ಕಸುಬುಗಳನ್ನು ಮಾಡಬೇಕು. ಜತೆಗೆ ಸಮುದಾಯದವರು ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

ಮಾರುಕಟ್ಟೆ ಸೌಲಭ್ಯ: ‘ದೇವರ ದಾಸಿಮಯ್ಯರ ತಂದೆ ರಾಮಯ್ಯ ಮತ್ತು ತಾಯಿ ಶಂಕರಿ. ಇವರು ನೇಯ್ಗೆ ಕಾಯಕ ಮಾಡುತ್ತಿದ್ದರು. ದಾಸಿಮಯ್ಯ ಬಾಲ್ಯದಿಂದಲೂ ಶಿವಭಕ್ತರಾಗಿದ್ದರು. ವಚನಕಾರರ ಯುಗದಲ್ಲಿ ಪ್ರಥಮ ವಚನಕಾರರಾಗಿ ದಾಸಿಮಯ್ಯ ಗುರುತಿಸಿಕೊಂಡಿದ್ದರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಉಪ ನಿರ್ದೇಶಕಿ ಲಕ್ಷ್ಮೀದೇವಮ್ಮ ಮಾಹಿತಿ ನೀಡಿದರು.

‘ನೇಕಾರ ಕುಟುಂಬಗಳಿಗೆ ಮಾರುಕಟ್ಟೆ ಸೌಲಭ್ಯದ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ನೇಕಾರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನದ ಜತೆಗೆ ಬಟ್ಟೆ ವಹಿವಾಟಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ರಾಜ್ಯ ನೇಕಾರರ ಒಕ್ಕೂಟದ ನಿರ್ದೇಶಕ ಲೋಕೇಶ್, ನೇಕಾರರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಾಗರಾಜ್, ನೇಕಾರ ಸಮುದಾಯದ ಮುಖಂಡರಾದ ನಟರಾಜ್, ಶ್ರೀನಿವಾಸ್, ಮಂಜುನಾಥ್, ವೆಂಕಟರಮಣ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.