ಗುರುವಾರ , ಆಗಸ್ಟ್ 5, 2021
21 °C
ಅಗಸ– ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ₹ 5 ಸಾವಿರ ಸಹಾಯಧನ

ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯಧನ: ಅರ್ಜಿ ಸಲ್ಲಿಕೆಗೆ ಡಿ.ಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಗಸ, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರು ಸರ್ಕಾರದ ಸಹಾಯಧನದಿಂದ ವಂಚಿತರಾಗದಂತೆ ಎಚ್ಚರ ವಹಿಸಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಧಿಕಾರಿಗಳಿಗೆ ಆದೇಶಿಸಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸರ್ಕಾರ ಕೋವಿಡ್‌–19 ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯ ಕಾರ್ಮಿಕರಿಗೆ ₹ 5 ಸಾವಿರ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಫಲಾನುಭವಿಗಳಿಗೆ ಸಹಾಯಧನ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಹೇಳಿದರು.

‘ಅರ್ಹರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಬೇಕು. ಹಲವು ದಿನಗಳ ಹಿಂದೆಯೇ ಅರ್ಜಿ ಆಹ್ವಾನಿಸಿದ್ದರೂ ಜಿಲ್ಲೆಯಲ್ಲಿ ಈವರೆಗೆ ಕೇವಲ 3,960 ಅರ್ಜಿ ಬಂದಿವೆ. ನನಗೆ ಕಾರ್ಯ ಒತ್ತಡ ಹೆಚ್ಚದ್ದ ಕಾರಣ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರದಿದ್ದರೆ ಹೇಗೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅರ್ಜಿ ಸಲ್ಲಿಕೆಗೆ ಜುಲೈ 10 ಕಡೆಯ ದಿನ. ಅಧಿಕಾರಿಗಳು ಕಡಿಮೆ ಅರ್ಜಿ ಬಂದಿರುವ ಸಂಗತಿಯನ್ನು ತಡವಾಗಿ ನನ್ನ ಗಮನಕ್ಕೆ ತಂದಿದ್ದೀರಿ. ಸರ್ಕಾರ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದರೆ ಸಮಸ್ಯೆಯಿಲ್ಲ. ಅಧಿಕಾರಿಗಳು ಸೇರಿದಂತೆ ಸಮುದಾಯಗಳ ಮುಖಂಡರೂ ಗಮನ ಹರಿಸಿ ಶುಕ್ರವಾರ ರಾತ್ರಿವರೆಗೂ ಸಾಧ್ಯವಾದಷ್ಟೂ ಹೆಚ್ಚು ಅರ್ಜಿ ಸಲ್ಲಿಕೆಯಾಗುವಂತೆ ಮಾಡಿ’ ಎಂದು ಸೂಚಿಸಿದರು.

‘ಸರ್ಕಾರದ ಮಾನದಂಡಕ್ಕೆ ಅನುಗುಣವಾಗಿ ಅರ್ಹರನ್ನು ಗುರುತಿಸಿ ಅವರಿಂದ ಸಹಾಯಧನಕ್ಕೆ ಅರ್ಜಿ ಹಾಕಿಸಬೇಕು. 18 ವರ್ಷ ಮೀರಿದ ಮತ್ತು 65 ವರ್ಷದೊಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಈ ಅರ್ಹತೆ ಹೊರತುಪಡಿಸಿ ಬೇರೆಯವರು ಅರ್ಜಿ ಸಲ್ಲಿಸಿದ್ದರೆ ತಿರಸ್ಕೃತವಾಗುತ್ತವೆ. ಅದಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

88 ಅರ್ಜಿ ತಿರಸ್ಕೃತ: ‘ಜಿಲ್ಲೆಯಲ್ಲಿ ಸಹಾಯಧನಕ್ಕೆ 3,960 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 2,056 ಅರ್ಜಿ ವಿಲೇವಾರಿ ಮಾಡಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಸಲ್ಲಿಸಿದ್ದ 88 ಅರ್ಜಿ ತಿರಸ್ಕೃತಗೊಂಡಿವೆ. ಉಳಿದ ಅರ್ಜಿಗಳಿಗೆ ಯಾವುದೇ ಸಮಸ್ಯೆಯಿಲ್ಲ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಪಾಟೀಲ್ ವಿವರಿಸಿದರು.

‘ಸಹಾಯಧನದ ಸೌಲಭ್ಯ ಕುರಿತು ಅಧಿಕಾರಿಗಳು ನಗರ ಪ್ರದೇಶಗಳಲ್ಲಿ ಮಾತ್ರ ಮಾಹಿತಿ ನೀಡಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಸಹಾಯಧನದ ಬಗ್ಗೆ ಮಾಹಿತಿಯಿಲ್ಲ’ ಎಂದು ಮಡಿವಾಳ ಮತ್ತು ಸವಿತಾ ಸಮುದಾಯದ ಮುಖಂಡರು ದೂರಿದರು.

‘ಅಗಸ ಎಂದರೆ ಬಟ್ಟೆ ಇಸ್ತ್ರಿ ಮಾಡುವುದಷ್ಟೇ ಅವರ ಕೆಲಸವಲ್ಲ. ಅದರಲ್ಲೂ ಬೇರೆ ಬೇರೆ ಕೆಲಸ ಇರುತ್ತವೆ. ಅದೇ ರೀತಿ ಸವಿತಾ ಸಮಾಜದಲ್ಲೂ ಇದ್ದಾರೆ. ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಹೋದರೆ ಕೆಲ ಅಧಿಕಾರಿಗಳು ಪರವಾನಗಿ ತೋರಿಸುವಂತೆ ಕೇಳುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದು, ಅರ್ಜಿ ಸಲ್ಲಿಕೆಗೆ ಮತ್ತಷ್ಟು ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ವಿವಿಧ ಇಲಾಖೆ ಅಧಿಕಾರಿಗಳು, ಮಡಿವಾಳ ಮತ್ತು ಸವಿತಾ ಸಮಾಜದ ಮುಖಂಡರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು