ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ವಸೂಲಿಗೆ ಡಿಸಿಸಿ ಅಧ್ಯಕ್ಷ

ಮರುಪಾವತಿಗೆ ಶ್ರೀಮಂತರೇ ಸತಾಯಿಸುತ್ತಿದ್ದಾರೆ: ಗೋವಿಂದೇಗೌಡ
Last Updated 26 ಫೆಬ್ರುವರಿ 2021, 2:45 IST
ಅಕ್ಷರ ಗಾತ್ರ

ಮುಳಬಾಗಿಲು: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಮನೆ, ಕುರಿ, ಕೋಳಿ ಸಾಕಾಣಿಕೆ ಮತ್ತಿತರೆ ಉದ್ದೇಶಗಳಿಗೆ ಪಡೆದುಕೊಂಡಿರುವ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಎಚ್ಚರಿಸಿದ್ದಾರೆ.

ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ರಸ ಗೊಬ್ಬರ ಅಂಗಡಿಗೆ ದಿಢೀರ್ ಭೇಟಿ ನೀಡಿ ಸಾಲ ಮರುಪಾವತಿ ಮಾಡಬೇಕೆಂದು ಒತ್ತಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾಲ ಪಡೆದಿರುವ ಬಡಬಗ್ಗರು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡುತ್ತಿದ್ದಾರೆ. ಆದರೆ ಶ್ರೀಮಂತರು ಸತಾಯಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಸಾಲ ಮರು ಪಾವತಿ ಮಾಡುತ್ತಿದ್ದಾರೆ. ಇದರಿಂದ ಹೊಸ ಸಾಲಗಳನ್ನು ನೀಡಲು ಅನುಕೂಲವಾಗುತ್ತಿದೆ. ವಾಣಿಜ್ಯ ವಹಿವಾಟು ನಡೆಸಲು ಪಡೆದಿರುವ ಸಾಲವನ್ನು ಕೆಲವರು ಸಕಾಲಕ್ಕೆ ಮರು ಪಾವತಿ ಮಾಡುತ್ತಿಲ್ಲ. ಇದೇ ರೀತಿ ಧೋರಣೆ ಮುಂದುವರಿದರೆ ಬ್ಯಾಂಕ್ ಅಧಿಕಾರಿಗಳಿಂದ ಅಂಗಡಿಗಳಿಗೆ ಬೀಗ ಹಾಕಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಸಾಲ ಪಡೆಯಲು ಬಂದಾಗ ನೈಸಾಗಿ ವರ್ತಿಸುತ್ತಾರೆ. ಸಾಲ ಪಡೆದುಕೊಂಡ ಮೇಲೆ ಒಂದು ರೀತಿ ವರ್ತಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ‘ಸಾಲ ನೀಡುವಾಗ ಯಾವುದೇ ಫಲಾನುಭವಿ ಕಡೆಯಿಂದ ಒಂದೇ ಒಂದು ಟೀ ಸಹ ಕುಡಿದಿಲ್ಲ. ಪ್ರಾಮಾಣಿಕವಾಗಿ ಸಾಲ ನೀಡಲಾಗುತ್ತಿದೆ. ಇದನ್ನು ಅರಿತು ಫಲಾನುಭವಿಗಳು ಸಕಾಲಕ್ಕೆ ಸಾಲ ಮರು ಪಾವತಿ ಮಾಡುವ ಮೂಲಕ ಡಿಸಿಸಿ ಬ್ಯಾಂಕ್‌ ಅನ್ನು ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಲುವರಾಜು, ವಸೂಲಾತಿ ಅಧಿಕಾರಿ ಚಿಕೂರು ಕೃಷ್ಣಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT