ಬುಧವಾರ, ಸೆಪ್ಟೆಂಬರ್ 18, 2019
22 °C
ಮೈತ್ರಿ ಅಭ್ಯರ್ಥಿ 

ಮುನಿಯಪ್ಪ ಸೋಲು ನಿಶ್ಚಿತ: ಸಿಎಂಗೆ 2 ಬಾರಿ ಗುಪ್ತಚರ ವರದಿ– ಕೊತ್ತೂರು ಮಂಜುನಾಥ್‌

Published:
Updated:

ಕೋಲಾರ: ‘ಕ್ಷೇತ್ರದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಕೆ.ಎಚ್‌.ಮುನಿಯಪ್ಪ ಅವರ ಸೋಲು ನಿಶ್ಚಿತ. ಈ ಬಗ್ಗೆ ಗುಪ್ತಚರ ದಳವು ಮುಖ್ಯಮಂತ್ರಿಯವರಿಗೆ 2 ಬಾರಿ ವರದಿ ನೀಡಿದೆ’ ಎಂದು ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಸ್ಫೋಟಕ ಸಂಗತಿ ಬಹಿರಂಗಪಡಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುನಿಯಪ್ಪ ಸೋಲುವುದು ಇಡೀ ಜಿಲ್ಲೆಗೆ ಗೊತ್ತು. ಈ ಬಗ್ಗೆ ಕಾಂಗ್ರೆಸ್‌ ಮುಖಂಡರಿಗೂ ವರದಿ ಹೋಗಿದೆ. ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯೇ ನನಗೆ ಗುಪ್ತಚರ ವರದಿಯ ಮಾಹಿತಿ ನೀಡಿದ್ದಾರೆ. ಸ್ವತಃ ಮುನಿಯಪ್ಪ ಅವರಿಗೂ ಸೋಲಿನ ಸಂಗತಿ ಗೊತ್ತಾಗಿದೆ’ ಎಂದರು.

‘ಮುನಿಯಪ್ಪರನ್ನು ಸೋಲಿಸಲು ಜನ ಮೊದಲೇ ತೀರ್ಮಾನಿಸಿದ್ದರು. ಜ್ವರ ಬಂದವರಿಗೆ ಗ್ಲೊಕೋಸ್‌ ಹಾಕಿದಂತೆ ನಾವು ಜನರಿಗೆ ಸ್ವಲ್ಪ ಶಕ್ತಿ ತುಂಬಿದೆವು. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೂ ತಮ್ಮ ಗೆಲುವಿನ ಬಗ್ಗೆ ನಂಬಿಕೆಯಿಲ್ಲ. ಆದರೆ, ಜನ ಬಿಜೆಪಿ ಮುಖ ನೋಡಿ ಮತ ಹಾಕಿದ್ದಾರೆ. ಮುನಿಯಪ್ಪ ಸೋಲುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಮುನಿಯಪ್ಪ ಅವರು ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದೆಂದು ಸಾಯಿ ಬಾಬಾ ಫೋಟೊ ಮೇಲೆ ಆಣೆ ಮಾಡಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ನನ್ನನ್ನು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿಸುವುದಾಗಿ ಅವರು ಸಾಯಿ ಬಾಬಾ ಮೇಲೆ ಆಣೆ ಮಾಡಿ ವಂಚಿಸಿದರು. ಈ ಮೋಸಕ್ಕೆ ದೇವರೇ ಅವರಿಗೆ ಸೋಲಿನ ಶಿಕ್ಷೆ ಕೊಟ್ಟಿದ್ದಾನೆ’ ಎಂದು ಕುಟುಕಿದರು.

‘ನಾನು ಜಾತಕ, ಜ್ಯೋತಿಷ್ಯ ನಂಬುತ್ತೇನೆ. ಮುನಿಯಪ್ಪ ಅವರಿಗೆ ಗುರು ಬಲವಿಲ್ಲ, ಅವರ ಕಥೆ ಮುಗಿಯಿತು. ಈ ಬಾರಿ ಅವರು ಸೋಲುತ್ತಾರೆ ಎಂದು ಜ್ಯೋತಿಷಿ ಹೇಳಿದ್ದಾರೆ. ಮುನಿಯಪ್ಪ ಅವರಿಗೆ ವಯಸ್ಸಾಗಿದೆ, ಅವರು ಜಿಲ್ಲೆಗಾಗಿ ಏನೂ ಮಾಡಿಲ್ಲ. ಅವರು ರೈಲ್ವೆ ಸಚಿವರಾಗಿದ್ದಾಗ ಶ್ರೀನಿವಾಸಪುರದಲ್ಲಿ ಕೋಚ್‌ ಕಾರ್ಖಾನೆಗೆ ಹಾಕಿದ್ದ ಅಡಿಗಲ್ಲೇ ಇಲ್ಲ’ ಎಂದು ಟೀಕಿಸಿದರು.

Post Comments (+)