ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಧರಣಿ

ಅಧಿಕಾರಿಗಳ ವೈಫಲ್ಯ: ರೈತ ಸಂಘ ಸದಸ್ಯರ ಆರೋಪ
Last Updated 17 ಆಗಸ್ಟ್ 2020, 18:12 IST
ಅಕ್ಷರ ಗಾತ್ರ

ಕೋಲಾರ: ಬೆಳೆ ಸಮೀಕ್ಷೆ ಹೊರತುಪಡಿಸಿ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ತೋಟಗಾರಿಕೆ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.

ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿ ಮಾಡಿದ್ದರಿಂದ ಹೂವು, ಟೊಮೆಟೊ ಬೆಲೆ ಕುಸಿತವಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದರು. ಆದರೆ, ಸರ್ಕಾರ ಬೆಳೆ ಸಮೀಕ್ಷೆ ಆಧರಿಸಿ ಪರಿಹಾರ ನೀಡುವುದಾಗಿ ಆದೇಶಿಸಿರುವುದು ಸರಿಯಲ್ಲ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನಿಂದ ಕೃಷಿ ಕ್ಷೇತ್ರ ತತ್ತರಿಸಿದೆ. ದೇಶದ ಅರ್ಥ ವ್ಯವಸ್ಥೆ ಬುಡಮೇಲಾಗಿದ್ದು, ಕೋಟ್ಯಂತರ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬೀದಿ ಪಾಲಾಗಿದ್ದಾರೆ. ಬೆಳೆಗೆ ಖರ್ಚು ಮಾಡಿದ ಬಂಡವಾಳ ಸಹ ಕೈಸೇರದೆ ಎಂದು ರೈತರಿಗೆ ದಿಕ್ಕು ತೋಚದಂತಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಲಾಕ್‌ಡೌನ್‌ನಿಂದ ನಷ್ಟವಾದ ಹೂವು ಮತ್ತು ವಾಣಿಜ್ಯ ಬೆಳೆಗಳಿಗೆ ಸರ್ಕಾರ ಪರಿಹಾರ ಮಾಡಿತ್ತು. ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ವರದಿ ನೀಡಿದ ರೈತರಿಗೆ ಮಾತ್ರ ಪರಿಹಾರಧನ ಬಿಡುಗಡೆ ಮಾಡಲಾಗಿದೆ. ರೈತರೇ ಸ್ವಇಚ್ಛೆಯಿಂದ ಅರ್ಜಿ ಸಲ್ಲಿಸಿದ್ದ ಬೆಳೆಗಳಿಗೆ ಪರಿಹಾರ ನೀಡಿಲ್ಲ’ ಎಂದು ದೂರಿದರು.

ಕಾಳಜಿಯಿಲ್ಲ: ‘ಬೆಳೆ ಪರಿಹಾರ ಬಿಡುಗಡೆಯಾಗದ ಸಂಬಂಧ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಅಧಿಕಾರಿಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಅಧಿಕಾರಿಗಳ ವೈಫಲ್ಯದಿಂದಲೇ ರೈತರಿಗೆ ಸಮಸ್ಯೆಯಾಗಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ಬೆಳೆ ಪರಿಹಾರ ನೀಡಿಕೆಯಲ್ಲಿ ಆಗಿರುವ ಸಮಸ್ಯೆ ಶೀಘ್ರವೇ ಸರಿಪಡಿಸಬೇಕು. ಸಬ್ಸಿಡಿ ದರದಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಖಾಸಗಿ ಅಂಗಡಿಗಳ ದಂಧೆಗೆ ಕಡಿವಾಣ ಹಾಕಬೇಕು. ವ್ಯಾಪಾರಸ್ಥರು ಮತ್ತು ಆಲೂಗಡ್ಡೆ ಬೆಳೆಗಾರರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿ ಮಾಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಮಂಜುನಾಥ್, ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಹನುಮಯ್ಯ, ನವೀನ್, ಜಗದೀಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT