ಮಂಗಳವಾರ, ಜನವರಿ 21, 2020
28 °C

ಕರ್ತವ್ಯ ಲೋಪ: ಉಪ ತಹಶೀಲ್ದಾರ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೋಲಾರ: ತಾಲ್ಲೂಕಿನ ಪ್ರಭಾರ ಉಪ ತಹಶೀಲ್ದಾರ್ ಆಗಿರುವ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಬಿ.ಕೆ.ವಿಜಯ್‌ದೇವ್‌ ಅವರನ್ನು ಕರ್ತವ್ಯ ಲೋಪ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ವಿಜಯ್‌ದೇವ್‌ ಅವರು ನಾಗರಿಕರ ಸೇವಾ ಖಾತ್ರಿ ನಿಯಮ 2011ರಡಿ ಸಲ್ಲಿಕೆಯಾದ ಅಟಲ್‌ಜಿ ಜನಸ್ನೇಹಿ ಕೇಂದ್ರದ (ಎಜೆಎಸ್‌ಕೆ) ಸೇವೆ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದೆ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ. ಎಜೆಎಸ್‌ಕೆ ಸೇವೆಗೆ ಸಂಬಂಧಿಸಿದ 43 ಅರ್ಜಿಗಳನ್ನು ಒಂದು ತಿಂಗಳ ನಂತರವೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಯು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ನಿಯಮದ ಪ್ರಕಾರ ಎಜೆಎಸ್‌ಕೆ ಸೇವೆ ಸಂಬಂಧ ಅರ್ಜಿ ಸಲ್ಲಿಕೆಯಾದ 30 ದಿನದೊಳಗೆ ಗ್ರಾಮ ಲೆಕ್ಕಿಗರಿಂದ ಅಥವಾ ರಾಜಸ್ವ ನಿರೀಕ್ಷಕರಿಂದ ಕಡತ ಪಡೆದು ತಂತ್ರಾಂಶದ ಮೂಲಕ ವಿಲೇವಾರಿ ಮಾಡಬೇಕು. ಈ ಸಂಗತಿ ಗೊತ್ತಿದ್ದರೂ ವಿಜಯ್‌ದೇವ್‌ ನಿಗದಿತ ಅವಧಿಯೊಳಗೆ ಎಜೆಎಸ್‌ಕೆ ತಂತ್ರಾಂಶದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಈ ಬಗ್ಗೆ ವಿಡಿಯೋ ಸಂವಾದದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಜತೆಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೂ ಅವರು ಅರ್ಜಿ ವಿಲೇವಾರಿ ಮಾಡಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಜಯ್‌ದೇವ್‌ ಅವರು ಅರ್ಜಿ ಬಾಕಿ ಇಟ್ಟುಕೊಂಡಿರುವ ಗ್ರಾಮ ಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿಲ್ಲ. ಅರ್ಜಿಗಳು ವಿಜಯ್‌ದೇವ್‌ರ ಲಾಗಿನ್‌ನಲ್ಲಿ ಅಂತಿಮ ಅನುಮೋದನೆಗೆ ಬಾಕಿಯಿವೆ. ಅವರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಸಾಬೀತಾಗಿರುವ ಕಾರಣ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು