ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವ್ಯಸನದಿಂದ ಭವಿಷ್ಯ ಸರ್ವ ನಾಶ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಹೇಳಿಕೆ
Last Updated 5 ಜುಲೈ 2020, 16:03 IST
ಅಕ್ಷರ ಗಾತ್ರ

ಕೋಲಾರ: ‘ಮಾದಕ ವ್ಯಸನದಿಂದ ಭವಿಷ್ಯವೇ ಸರ್ವ ನಾಶವಾಗುತ್ತದೆ. ಮಾದಕ ವಸ್ತುಗಳ ಸೇವನೆಯು ಜೀವಕ್ಕೆ ಅಪಾಯಕಾರಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ, ಮಾನವ ಕಳ್ಳ ಸಾಗಾಣಿಕೆ ಮತ್ತು ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಯುವಕ ಯುವತಿಯರು ಬಹುಬೇಗನೆ ಮಾದಕ ವಸ್ತುಗಳಿಗೆ ಆಕರ್ಷಿತರಾಗಿ ಆರೋಗ್ಯ ಹಾಗೂ ಜೀನವ ಹಾಳು ಮಾಡಿಕೊಳ್ಳುತ್ತಾರೆ. ಮಾದಕ ವ್ಯಸನಿಗಳು ತಮ್ಮ ಕುಟುಂಬದ ನೆಮ್ಮದಿ ಕೆಡಿಸುತ್ತಾರೆ. ಜತೆಗೆ ಸಮಾಜಕ್ಕೂ ಕಂಟಕ ಪ್ರಾಯರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಭವಿಷ್ಯ ಯುವಕ ಯುವತಿಯರ ಮೇಲೆ ಅವಲಂಬಿತವಾಗಿದೆ. ಆದರೆ, ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ಬೀದಿ ಪಾಲಾಗುತ್ತಿವೆ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮಾರಕ ಪಿಡುಗು: ‘ಮಾದಕ ವ್ಯಸನವು ಮಾರಕ ಪಿಡುಗು. ಸುತ್ತಮುತ್ತಲಿನವರೇ ಈ ವ್ಯಸನಕ್ಕೆ ಒಳಗಾಗಿರಬಹುದು. ಅವರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಣೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌ ಮನವಿ ಮಾಡಿದರು.

‘ಮಕ್ಕಳು ದುಶ್ಚಟಕ್ಕೆ ಬಲಿಯಾಗಲು ಬಡತನ ಪ್ರಮುಖ ಕಾರಣ. ಯಾರೂ ವೈಯಕ್ತಿಕವಾಗಿ ಚಟಗಳಿಗೆ ಒಳಗಾಗುತ್ತಿಲ್ಲ. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯುವುದು ಸಾಮಾನ್ಯವಾಗಿದೆ. ಸ್ವಸ್ಥ ಸಮಾಜ ನಿರ್ಮಾಣವು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಶಿಬಿರ: ‘ಮಾದಕ ವ್ಯಸನ ತ್ಯಜಿಸಲು ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ವೈದ್ಯರ ತಂಡದಿಂದ ಸೂಕ್ತ ಚಿಕಿತ್ಸೆ ಬಗ್ಗೆ ಸಲಹೆ ಪಡೆಯಬಹುದು. ಘಟಕದ ಸಿಬ್ಬಂದಿಯು ಪ್ರತಿ ಮಂಗಳವಾರ ತಾಲ್ಲೂಕು ಆಸ್ಪತ್ರೆಗಳಲ್ಲಿ ಶಿಬಿರ ಏರ್ಪಡಿಸಿ ಚಿಕಿತ್ಸೆ ನೀಡುತ್ತಾರೆ. ಮಾದಕ ವ್ಯಸನಿಗಳು ಶಿಬಿರದ ಸದುಪಯೋಗ ಪಡೆಯಬೇಕು’ ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಉಪಾಧ್ಯಕ್ಷ ಫಯಾಜ್ ಅಹಮ್ಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT