ಶುಕ್ರವಾರ, ಅಕ್ಟೋಬರ್ 22, 2021
20 °C
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್ ಅಭಿಪ್ರಾಯ

ಕಾರ್ಮಿಕರ ಶ್ರಮದಿಂದ ದೇಶದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಸಂಘಟಿತ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಜಾಗೃತರಾಗಬೇಕು. ಸರ್ಕಾರ ನಿಮ್ಮ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಪ್ರಯೋಜನ ಪಡೆಯಿರಿ’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್ ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ತಾಲ್ಲೂಕಿನ ನರಸಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಾಗೃತಿ ಮತ್ತು ಕಾನೂನು ಅರಿವು, ಕಾರ್ಮಿಕ ಕಾಯ್ದೆ ಹಾಗೂ ಹಕ್ಕುಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕಾರ್ಮಿಕರ ಪರಿಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಿದೆ. ಆದರೆ, ಪ್ರತಿ ಹಂತದಲ್ಲೂ ದುಡಿಮೆಯೇ ಬದುಕು ಎಂದು ಸಾಗುವ ಕಾರ್ಮಿಕರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದ್ದರೂ ಅವರಿಗೆ ತಲುಪುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಸಂಘಟಿತ ಕಾರ್ಮಿಕರು ಜೀವನಪೂರ್ತಿ ದುಡಿದು ಸಂಧ್ಯಾ ಸಮಯದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಸಂಕಷ್ಟ ಅನುಭವಿಸುವುದು ತಪ್ಪಬೇಕು. ಇದಕ್ಕೆ ಕಾರ್ಮಿಕ ಕಾನೂನುಗಳಡಿ ಅನೇಕ ಸೌಲಭ್ಯಗಳಿವೆ. ಆರೋಗ್ಯ ವಿಮೆ ಸೌಲಭ್ಯವಿದೆ. ಆದರೆ, ಈ ಬಗ್ಗೆ ಸಾಕಷ್ಟು ಕಾರ್ಮಿಕರಿಗೆ ಅರಿವಿಲ್ಲ’ ಎಂದು ವಿಷಾದಿಸಿದರು.

‘ಕೋವಿಡ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಅಸಂಘಟಿತ ಕಾರ್ಮಿಕರು ಸಾಕಷ್ಟು ಸಮಸ್ಯೆ ಅನುಭವಿಸಿದರು. ಅನೇಕರು ಕೊರೊನಾ ಸೋಂಕಿಗೂ ಬಲಿಯಾದರು. ಕಾರ್ಮಿಕರ ಆರೋಗ್ಯ ರಕ್ಷಣೆಗೆ ಕಾರ್ಮಿಕ ಇಲಾಖೆಯಲ್ಲಿ ವಿಮೆ ಯೋಜನೆಯಿದ್ದು, ಇದರ ಸದುಪಯೋಗ ಪಡೆಯಿರಿ’ ಎಂದು ಸಲಹೆ ನೀಡಿದರು.

ಸರ್ಕಾರ ಗುರುತಿಸಿದೆ: ‘ಅಸಂಘಟಿತ ವಲಯದ ಕಾರ್ಮಿಕರನ್ನು ಸರ್ಕಾರವೇ ಗುರುತಿಸಿದೆ. ಇತ್ತೀಚಿನ ದಿನಗಳಲ್ಲಿ ಹೋಟೆಲ್ ಕಾರ್ಮಿಕರು, ಅಡುಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅರ್ಚಕರು, ಪುರೋಹಿತರು ಸೇರಿದಂತೆ ಅನೇಕರು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಂಡಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ವಿವರಿಸಿದರು.

‘ಅಸಂಘಟಿತ ಕಾರ್ಮಿಕರ ಸರ್ಕಾರದ ಸೌಲಭ್ಯಗಳ ಅರಿವಿಲ್ಲ. ಸರ್ಕಾರ ಈ ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಜತೆಗೆ ಕಾರ್ಮಿಕ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಹೆಸರು ನೋಂದಾಯಿಸಿ: ‘ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ. ಕಾರ್ಮಿಕರು ಮೊದಲು ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆದುಕೊಳ್ಳಿ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್ ಸೂಚಿಸಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ವಕೀಲರಾದ ಕೆ.ಆರ್.ಧನರಾಜ್, ಶ್ರೀಕಾಂತ್‌, ಕಾರ್ಮಿಕ ಇಲಾಖೆ ವೃತ್ತ ನಿರೀಕ್ಷಕಿ ರಾಜೇಶ್ವರಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.