ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸಿ ರೋಗ: ಕೀಟನಾಶಕ ವಿತರಣೆಗೆ ಮನವಿ

ತೋಟಗಾರಿಕೆ ಬೆಳೆಗಳಿಗೆ ಊಜಿ ನೊಣದ ಬಾಧೆ: ರೈತರು ಕಂಗಾಲು
Last Updated 7 ಅಕ್ಟೋಬರ್ 2021, 16:35 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಟೊಮೆಟೊ, ಕ್ಯಾಪ್ಸಿಕಂ ಮತ್ತು ಹೂವಿನ ಬೆಳೆಯಲ್ಲಿ ಕಾಣಿಸಿಕೊಂಡಿರುವ ಊಜಿ ನೊಣ ಹಾಗೂ ನುಸಿ ರೋಗದ ಹತೋಟಿಗೆ ಉಚಿತವಾಗಿ ಕೀಟನಾಶಕ ನೀಡುವಂತೆ ಒತ್ತಾಯಿಸಿ ರೈತ ಸಂಘ ಸದಸ್ಯರು ಇಲ್ಲಿ ಗುರುವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯು ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ಇದೀಗ ಟೊಮೆಟೊ, ಕ್ಯಾಪ್ಸಿಕಂ, ಹಾಗಲಕಾಯಿ ಬೆಳೆಯಲ್ಲಿ ಊಜಿ ನೊಣ ಮತ್ತು ನುಸಿ ರೋಗ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ’ ಎಂದು ಸಂಘಟನೆ ಸದಸ್ಯರು ಹೇಳಿದರು.

‘ಜಿಲ್ಲೆಯ ಲಕ್ಷಾಂತರ ರೈತರು ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ, ಕೃಷಿಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಬೆಳೆಗಳಿಗೆ ನುಸಿ ರೋಗ ಬಂದಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ತಿಳಿಸಿದರು.

‘ರೈತರಿಗೆ ಊಜಿ ನೊಣ ಮತ್ತು ನುಸಿ ರೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ರೋಗ ಹತೋಟಿಗೆ ಬರುತ್ತಿಲ್ಲ. ರೋಗ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ಕೊಡುತ್ತಿಲ್ಲ. ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ’ ಎಂದರು.

‘ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿವೆ. ಟೊಮೆಟೊ, ಕ್ಯಾಪ್ಸಿಕಂ, ಹೂವು, ಹಾಗಲಕಾಯಿ, ಸೋರೆಕಾಯಿ, ಬೆಂಡೇ ಕಾಯಿ ಬೆಳೆಯಲ್ಲೂ ಊಜಿ ನೊಣ ಮತ್ತು ನುಸಿ ರೋಗ ಕಾಣಿಸಿಕೊಂಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ’ ಎಂದು ಮಂಗಸಂದ್ರ ಗ್ರಾಮದ ರೈತ ತಿಮ್ಮಣ್ಣ ಅಳಲು ತೋಡಿಕೊಂಡರು.

ಹಿತ ಕಾಯುತ್ತಿಲ್ಲ: ‘ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮತ್ತೊಂದೆಡೆ ಅತಿವೃಷ್ಟಿ, ಅನಾವೃಷ್ಟಿ, ರೋಗಗಳಿಂದ ಬೆಳೆ ಹಾಳಾಗುತ್ತಿದೆ. ಬೆಳೆ ನಷ್ಟ, ಬೆಲೆ ಕುಸಿತದಿಂದಾಗಿ ರೈತರು ಬೆಳೆಯನ್ನು ಜಮೀನಿನಲ್ಲೇ ನಾಶಪಡಿಸುತ್ತಿದ್ದಾರೆ. ಮತ್ತೆ ಕೆಲ ರೈತರ ಬೆಳೆಗಳನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳು ಅವರ ಹಿತ ಕಾಯುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ತೋಟಗಾರಿಕೆ ಇಲಾಖೆ ಅಧಿಕಾರಿಗಳು ನುಸಿ ರೋಗದ ಬಗ್ಗೆ ತಮಗೆ ಮಾಹಿತಿಯಿಲ್ಲ ಎನ್ನುತ್ತಾರೆ. ವಿಜ್ಞಾನಿಗಳನ್ನು ಕರೆಸಿ ತಪಾಸಣೆ ಮಾಡಿಸಿ ನಂತರ ಮಾಹಿತಿ ಕೊಡುವುದಾಗಿ ಹೇಳುತ್ತಾರೆ. ಏಕ ಕಾಲದಲ್ಲಿ ಎಲ್ಲಾ ರೈತರು ಬೆಳೆ ಕಟಾವು ಮಾಡಿ ಕೀಟನಾಶಕ ಸಿಂಪಡಿಸಿದರೆ ರೋಗ ಹತೋಟಿಗೆ ಬರುತ್ತದೆ ಎಂದು ಸಲಹೆ ನೀಡುತ್ತಾರೆ. ಆದರೆ, ಎಲ್ಲಾ ರೈತರು ಏಕಕಾಲದಲ್ಲಿ ಬೆಳೆ ಕಟಾವು ಮಾಡಲು ಸಾಧ್ಯವಿಲ್ಲ’ ಎಂದರು.

‘ನುಸಿ ರೋಗ ನಿಯಂತ್ರಿಸಲು ರೈತರಿಗೆ ಉಚಿತವಾಗಿ ಕೀಟನಾಶಕ ನೀಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ಕೊಟ್ಟು ರೈತರ ಹಿತ ಕಾಯಬೇಕು. ಇಲ್ಲವಾದರೆ ತರಕಾರಿ, ಜಾನುವಾರುಗಳ ಸಮೇತ ಹೆದ್ದಾರಿ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘ ರಾಜ್ಯ ಘಟಕದ ಸಂಚಾಲಕ ನಾಗರಾಜಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ, ಸದಸ್ಯರಾದ ಶಿವಾರೆಡ್ಡಿ, ನಾಗೇಶ್, ಕಿರಣ್, ಚಂದ್ರಪ್ಪ, ಹನುಮಯ್ಯ, ಯಲ್ಲಪ್ಪ, ವೆಂಕಟೇಶ್, ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT