ಕೋಲಾರ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಚುಕ್ಕೆ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ ₹ 200 ಕೋಟಿಗೂ ಹೆಚ್ಚು ಟೊಮೆಟೊ ವಹಿವಾಟು ನಡೆಯತ್ತದೆ.
ಜಿಲ್ಲೆಯಿಂದ ರಾಜಸ್ತಾನ, ಕೇರಳ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ, ಜಾರ್ಖಂಡ್, ಒಡಿಶಾ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ರಫ್ತಾಗುತ್ತದೆ.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದೊಂದು ವಾರದಿಂದ ಮೋಡ ಮುಸುಕಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಟೊಮೆಟೊ ಬೆಳೆಯಲ್ಲಿ ಚುಕ್ಕೆ ರೋಗ ಕಾಣಿಸಿಕೊಂಡಿದೆ.
ಬಹುತೇಕ ತಾಲ್ಲೂಕುಗಳಲ್ಲಿ ಟೊಮೆಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಚುಕ್ಕೆ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ.
ಚುಕ್ಕೆ ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಗಿಡದ ಎಲೆಗಳನ್ನು ತಿನ್ನುತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ. ಲಾಕ್‌ಡೌನ್ ವೇಳೆ ಸರಕು ಸಾಗಣೆ ಸೇವೆ ಸ್ಥಗಿತಗೊಂಡು ಬೆಲೆ ಕುಸಿತವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದ ಟೊಮೆಟೊ ಬೆಳೆಗಾರರಿಗೆ ಇದೀಗ ಚುಕ್ಕಿ ರೋಗ ದೊಡ್ಡ ಪೆಟ್ಟು ಕೊಟ್ಟಿದೆ.
ಹತೋಟಿಗೆ ಬರುತ್ತಿಲ್ಲ: ರೈತರು ಬೆಳೆಗೆ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೊ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
ಮೋಡ ಮುಸುಕಿದ ವಾತಾವರಣ ಹಾಗೂ ಜಡಿ ಮಳೆ ಮುಂದುವರಿದರೆ ಚುಕ್ಕೆ ರೋಗ ಮತ್ತಷ್ಟು ಉಲ್ಬಣಗೊಂಡು ಟೊಮೆಟೊ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.