ಮಂಗಳವಾರ, ಸೆಪ್ಟೆಂಬರ್ 21, 2021
29 °C

ಸಾಮಾಜಿಕ ಸೇವೆಯಲ್ಲಿ ದೈವತ್ವ ಕಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಾಮಾಜಿಕ ಸೇವೆಯಲ್ಲಿ ದೈವತ್ವ ಕಾಣಬೇಕು. ವಿಶ್ವವೇ ಒಂದು ಕುಟುಂಬವೆಂಬ ಚಿಂತನೆ ಬಲಗೊಂಡು ಕಾರ್ಯತತ್ಪರತೆ ಮೂಡಿದರೆ ಸ್ವಾರ್ಥ ಭಾವಕ್ಕೆ ಅವಕಾಶವೇ ಇರುವುದಿಲ್ಲ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗುರುರಾಜ್ ಶಿರೋಳ್ ಅಭಿಪ್ರಾಯಪಟ್ಟರು.

ಅಥಣಿಗೆ ವರ್ಗಾವಣೆಯಾಗಿರುವ ಶಿರೋಳ್‌ ಅವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಾಗೃತಿ ಸೇವಾ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ. ‘ವಸುದೈವ ಕುಟುಂಬ ಎಂಬುದೇ ಭಾರತೀಯತೆ. ಇದು ನಮ್ಮ ಪರಂಪರೆಯೂ ಹೌದು. ನಾವು ಅಗತ್ಯವಿದ್ದಷ್ಟು ಪಡೆದು ಉಳಿದದ್ದನ್ನು ದಾನ ಮಾಡಬೇಕು. ಎಲ್ಲವೂ ನನಗೆ ಬೇಕೆಂದರೆ ನಾಶ ಖಚಿತ’ ಎಂದರು.

‘ಹಸಿದವರಿಗೆ ಸಹಾಯ ಮಾಡಿದರೆ ಸಿಗುವ ಆತ್ಮತೃಪ್ತಿ ಬೇರೆ ಯಾವ ಕಾರ್ಯದಲ್ಲೂ ಸಿಗದು. ಅಂತಹ ಕೆಲಸವನ್ನು ಅಂತರಾಳದಿಂದ ಮಾಡಿದರೆ ಶ್ರೇಯಸ್ಸು ಖಚಿತ. ನನಗೆ ನಗರದ ಸ್ವಚ್ಛತೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಆಶಯವಿತ್ತು. ಜತೆಗೆ ಅಮ್ಮೇರಹಳ್ಳಿ ಕೆರೆ ಪುನಶ್ಚೇತನ ಮಾಡುವ ಕನಸ್ಸಿತ್ತು. ಆದರೆ, ಕಾಲ ಕೂಡಿ ಬರಲಿಲ್ಲ, ವರ್ಗಾವಣೆಯಾಗಿದೆ’ ಎಂದು ಹೇಳಿದರು.

ಅನುಕರಣೀಯ: ‘ಶಿರೋಳ್ ಅವರ ಸಮಯ ಪ್ರಜ್ಞೆ, ಸಾಮಾಜಿಕ ಮತ್ತು ಪರಿಸರ ಕಾಳಜಿ ಆದರ್ಶವಾಗಿದೆ. ನ್ಯಾಯಾಧೀಶರಾದರೂ ಎಲ್ಲರೊಂದಿಗೆ ಬೆರೆಯುವ ಅವರ ಗುಣ ಅನುಕರಣೀಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ಸ್ಮರಿಸಿದರು.

‘ಶಿರೋಳ್‌ ಅವರು ಪರಿಸರ ಕಾಳಜಿಯಿಂದ ಜಿಲ್ಲೆಯಲ್ಲಿ ನೆಟ್ಟ ಸಾವಿರಾರು ಗಿಡಗಳು ಮುಂದೆ ಬೆಳೆದು ಫಲ ನೀಡುತ್ತವೆ. ಸಮಾಜಕ್ಕಾಗಿ ನಾವು ಎಂಬ ಧನಾತ್ಮಕ ಭಾವನೆಯಿಂದ ಕೆಲಸ ಮಾಡುವ ಅವರು ಮಾದರಿ’ ಎಂದು ಹೇಳಿದರು.

ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್, ಮುಸ್ಸಂಜೆ ಮನೆ ಸಂಸ್ಥೆ ನಿರ್ದೇಶಕ ಮುನಿಯಪ್ಪ, ಗೋಪ್ಲಾಗ್ ಸಂಸ್ಥೆ ಪ್ರತಿನಿಧಿ ಸುಮಾ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.