ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಮಾದಕ ವ್ಯಸನದಿಂದ ಭವಿಷ್ಯ ಕತ್ತಲು: ಜೆ.ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಕ್ಕಳು ಮಾದಕ ವಸ್ತುಗಳ ದಾಸರಾಗದಂತೆ ರಕ್ಷಿಸುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಹಾಗೂ ತುಳಸಿ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ತೊಂಡಾಲ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

‘ಮಕ್ಕಳು ದುಶ್ಚಟಕ್ಕೆ ಬಲಿಯಾಗಲು ಬಡತನ ಪ್ರಮುಖ ಕಾರಣ. ಯಾರೂ ವೈಯಕ್ತಿಕವಾಗಿ ಚಟಗಳಿಗೆ ಒಳಗಾಗುತ್ತಿಲ್ಲ. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯುವುದು ಸಾಮಾನ್ಯವಾಗಿದೆ. ಸ್ವಸ್ಥ ಸಮಾಜ ನಿರ್ಮಾಣವು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಜಾಗತಿಕವಾಗಿ ಒಟ್ಟು ಮಾದಕ ವ್ಯಸನಿಗಳ ಪೈಕಿ ಶೇ 50ರಷ್ಟು ಮಂದಿ ಯುವಕ ಯುವತಿಯರಾಗಿದ್ದಾರೆ. ಮಾದಕ ವಸ್ತುಗಳು ಯುವ ಜನಾಂಗದ ಭವಿಷ್ಯ ಹಾಳು ಮಾಡುತ್ತಿವೆ. ದೇಶದ ಭವಿಷ್ಯ ಯುವಕ ಯುವತಿಯರ ಮೇಲೆ ಅವಲಂಬಿತವಾಗಿದೆ. ಆದರೆ, ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಯುವಕ ಯುವತಿಯರು ಧೂಮಪಾನ, ಮದ್ಯಪಾನ, ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರ. ಮಾದಕ ವ್ಯಸನ ಮತ್ತು ಮದ್ಯ ಸೇವನೆಯಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆ ಹೆಚ್ಚುತ್ತಿವೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಮಕ್ಕಳ ಭವಿಷ್ಯ ಕತ್ತಲಾಗುತ್ತಿದೆ’ ಎಂದು ವಿಷಾದಿಸಿದರು.

ಐತರಾಸನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ರಶ್ಮಿ, ತೊಂಡಾಲ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಪಿಡಿಒ ಸತೀಶ್‌ಕುಮಾರ್‌, ಕೋಲಾರ–ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜನ ಜಾಗೃತಿ ಸಂಸ್ಥೆ ಸದಸ್ಯ ಶಶಿಕುಮಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯೋಜಕಿ ಸೌಮ್ಯ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು