ಆವಿಷ್ಕಾರ ಕನ್ನಡೀಕರಣದಿಂದ ಭಾಷೆ ಗಟ್ಟಿ: ಶಿಕ್ಷಣ ತಜ್ಞ ಕೋಡಿರಂಗಪ್ಪ

ಶನಿವಾರ, ಮೇ 25, 2019
25 °C

ಆವಿಷ್ಕಾರ ಕನ್ನಡೀಕರಣದಿಂದ ಭಾಷೆ ಗಟ್ಟಿ: ಶಿಕ್ಷಣ ತಜ್ಞ ಕೋಡಿರಂಗಪ್ಪ

Published:
Updated:
Prajavani

ಕೋಲಾರ: ‘ಜ್ಞಾನಕ್ಕೆ ಯಾವುದೇ ಗೋಡೆ ಇಲ್ಲ. ಹೊಸ ವಿಷಯಗಳ ಆವಿಷ್ಕಾರ, ಜನರ ಒಳಿತಿನ ವಿಚಾರಗಳು ಕನ್ನಡೀಕರಣಗೊಂಡಾಗ ಕನ್ನಡ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ’ ಎಂದು ಶಿಕ್ಷಣ ತಜ್ಞ ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ‘ಯಾವ ರಾಷ್ಟ್ರ ಸಾಂಸ್ಕೃತಿಕವಾಗಿ ಸಂಪದ್ಬರಿತವಾಗಿಲ್ಲವೋ ಆ ದೇಶಗಳಲ್ಲಿ ವ್ಯಕ್ತಿಗಳ ನಡುವಿನ ಸಂಬಂಧಗಳಿಗೆ ಬೆಲೆ ಇರುವುದಿಲ್ಲ’ ಎಂದು ತಿಳಿಸಿದರು.

‘ಸಾಂಸ್ಕೃತಿಕ ಸಂಪತ್ತು ದೇಶದ ಮನಸ್ಥಿತಿಯ ದ್ಯೋತಕ. ಸಂಸ್ಕಂತಿ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾದುದು. ಭಾಷೆ, ಸಾಹಿತ್ಯ, ಸಂಸ್ಕೃತಿ, ನುಡಿ ಬೆಳೆಸದೆ ನಾಡು ಕಟ್ಟಲಾಗದು’ ಎಂದರು.

‘1915ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಸಹಕಾರದಿಂದ ಆರಂಭಿಸಿದ ಕಸಾಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದಿದೆ. ಪರಿಷತ್ತು ರಾಜಕೀಯ, ಸ್ವಾರ್ಥ ರಹಿತವಾಗಿ ಮುನ್ನಡೆಯಬೇಕು ಎಂಬುದು ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯವಾಗಿತ್ತು. ಈ ವಾತಾವರಣ ಹಿಂದಿಗಿಂತಲೂ ಹೆಚ್ಚು ಗಟ್ಟಿಯಾಗಬೇಕು’ ಎಂದು ಹೇಳಿದರು.

‘ಸಾಹಿತ್ಯದ ಅಧ್ಯಯನ, ಓದುವ ಅಭಿರುಚಿ ಬೆಳೆಯಬೇಕು, ಕನ್ನಡದ ಧ್ವನಿ ಭಾರತದ ಗಟ್ಟಿ ಧ್ವನಿಯಾಗಬೇಕು. ತಾಯಿ ಸ್ಥಾನದಲ್ಲಿ ಕನ್ನಡ ಇಟ್ಟು ಪೂಜಿಸಿ, ಬೆಳೆಸೋಣ. ಕನ್ನಡದ ಓದು, ಚಿಂತನೆ, ಕ್ರಿಯಾಶೀಲತೆಯಿದ್ದರೆ ಅದು ಶ್ರಮ ಸಮಾಜದ ಗುರುತು. ಬೌದ್ಧಿಕ, ಭಾವನಾತ್ಮಕ, ನೈತಿಕ ಬೆಳೆವಣಿಗೆಗೆ ಪರಿಷತ್ ಗುರು ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿ ಹಲವು ವರ್ಷಗಳು ಕಳೆದಿದೆ. ಕಚೇರಿ ಎಲ್ಲಿ ತೆರೆಯಬೇಕು. ನಿರ್ದೇಶಕರಾಗಲು ಲಾಭಿ ನಡೆಯುತ್ತಿದೆಯೇ ವಿನಃ ಭಾಷೆಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಪ್ರಯತ್ನ ಸಾಲದು’ ಎಂದು ವಿಷಾದಿಸಿದರು.

‘ದೇಶದಲ್ಲಿ 25 ಕೋಟಿ ಮಂದಿ ಇಂದಿಗೂ ಅನಕ್ಷರಸ್ಥರಾಗಿ ಉಳಿದಿದ್ದಾರೆ. ಅವರಿಗೆ ಅಕ್ಷರ ಕಲಿಸುವ ದಿಸೆಯಲ್ಲಿ ಪರಿಷತ್ ಕೆಲಸ ಮಾಡಬೇಕು. ಜನ ಬಯಸುವ ಪುಸ್ತಕಗಳು ಯಾವುದು ಎಂಬುದನ್ನು ತಜ್ಞರ ಸಮಿತಿ ರಚಿಸಿ ಗುರುತಿಸಿ ಅವುಗಳಿಗೆ ಸರ್ಕಾರದ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ, ಕನ್ನಡ ಶಾಲೆಗಳನ್ನು ಬಲಗೊಳಿಸಲು ಒತ್ತಾಯಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ ಮಾತನಾಡಿ, ‘ರಾಜ್ಯದ ಜನತೆ ಪರಭಾಷಿಗರ ಜತೆ ಅಪರ ಭಾಷೆಯಲ್ಲೇ ವ್ಯವಹರಿಸುವುದನ್ನು ಕಾಣುತ್ತೇವೆ. ನಮ್ಮಲ್ಲಿ ಯಾಕೆ ಮಾತೃಭಾಷೆಯ ಪ್ರೇಮ ಗಟ್ಟಿಯಾಗಿಲ್ಲ ಎಂಬುದನ್ನು ವಿಮರ್ಶೆ ಮಾಡಬೇಕು’ ಎಂದು ಹೇಳಿದರು.

‘1915ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಸಹಕಾರದಿಂದ ಆರಂಭಿಸಿದ ಕಸಾಪ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದಿದೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ‘ಪರಿಷತ್ ಕನ್ನಡಿಗರ ಕ್ರಿಯಾಶೀಲ ಸಂಸ್ಥೆಯಾಗಿ ಬೆಳೆಯುತ್ತಿದ್ದು, 3.15 ಲಕ್ಷ ಸದಸ್ಯರನ್ನು ಹೊಂದಿದೆ’ ಎಂದು ತಿಳಿಸಿದರು.

‘30 ಜಿಲ್ಲಾ ಘಟಕಗಳು, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ಮುಂಬೈ ನಗರ ಹಾಗೂ ಇತ್ತೀಚೆಗಷ್ಟೇ ಗೋವಾದಲ್ಲೂ ಕಸಾಪ ಘಟಕ ಆರಂಭವಾಗಿದೆ. ಪರಿಷತ್ತಿಗೆ ಜಾತಿ, ಮತ, ಭಾಷೆ, ಧರ್ಮವಿಲ್ಲ. ಕನ್ನಡಿಗರೆಲ್ಲರಿಗೂ ಕನ್ನಡವೇ ಜಾತಿ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೋ.ಎಂ.ಮುನಿರತ್ನಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ಶಂಕರೇಗೌಡ, ಪರಿಷತ್ ಪದಾಧಿಕಾರಿಗಳಾದ ಆರ್.ಅಶ್ವಥ್, ಆರ್.ಎಂ.ವೆಂಕಟಸ್ವಾಮಿ, ರತ್ನಪ್ಪ ಮೇಲಾಗಣಿ, ಸುಮಿತ್ರಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !